Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *14*


*▪ಸಂಗಾತಿಯನೆಂದೂ  ಕೈಬಿಡದ ಪಾರಿವಾಳ▪*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

         ▪ಮಸೀದಿಗಳ ಮಿನಾರ, ಗೋಪುರ, ಅಂತೆಯೇ ಎತ್ತರವಾದ ಕಟ್ಟಡಗಳನ್ನು ಕೇಂದ್ರೀಕರಿಸಿ ಅದರ ತುದಿಯಲ್ಲಿ ಗೂಡುಕಟ್ಟಿ ವಾಸಿಸುವ ಒಂದು ಸಾಧು ಸ್ವಭಾವದ ಪಕ್ಷಿಯಾಗಿದೆ ಪಾರಿವಾಳ.
   ▪ಗರ್ಭಧಾರಣೆಯಾಗಿ  ಬರೀ ಹದಿನಾಲ್ಕು ದಿನದಲ್ಲಿ ಮೊಟ್ಟೆ ಇಡುತ್ತದೆ. ಕೇವಲ ಎರಡೇ ಎರಡು ಮೊಟ್ಟೆ ಮಾತ್ರ. ಒಂದು ಮೊಟ್ಟೆಯನ್ನು ಹಗಲಿಟ್ಟರೆ ಮತ್ತೊಂದನ್ನು ಅಂದೇ ರಾತ್ರಿ ಇಡುತ್ತದೆ. ಮೊಟ್ಟೆಗೆ ಹಗಲು ಹೊತ್ತು ತಾಯಿ ಪಾರಿವಾಳ ಕಾವು ಕೊಟ್ಟರೆ ರಾತ್ರಿ ತನ್ನ ಸಂಗಾತಿ ಗಂಡು ಪಾರಿವಾಳವು ಕಾವು ಕೊಡುತ್ತದೆ. ಇಪ್ಪತ್ತು ದಿನಗಳ ಕಾವು ಕೊಡುವಿಕೆಯ ನಂತರ ಮೊಟ್ಟೆಯೊಡೆದು ಹೊರ ಬರುವ ಮರಿ ಒಂದು ಗಂಡು ಮತ್ತೊಂದು ಹೆಣ್ಣು.   ಸುಬ್ಹಾನಲ್ಲಾಹ್...!!
  ▪ಸಾಧಾರಣ ಹತ್ತು ಹದಿನೈದು ವರ್ಷ ಬದುಕುವ ಈ ಪಕ್ಷಿಗೆ ನೆನಪುಶಕ್ತಿ ಮತ್ತು ಬುದ್ದಿ ಬಹಳ ಹೆಚ್ಚು. ತನ್ನ ಗೂಡು ಇರುವ ಒಂದು ಊರಿನಿಂದ ಬೇರೊಂದು ಊರಿಗೆ ಇದನ್ನು ಕೊಂಡುಹೋಗಿ ಹತ್ತು ವರ್ಷ ಕಳೆದು ಅಲ್ಲಿಂದ ಬಿಟ್ಟರೂ ತನ್ನ ಊರು ಮತ್ತು ಹಳೆಯ ಗೂಡಿರುವ ಜಾಗವನ್ನು ನಿರಾಯಾಸ ಕಂಡು ಹಿಡಿಯುತ್ತದೆ.
  ▪ಕೆಲವೊಮ್ಮೆ ಇದು ಒಂದು ದಿನದಲ್ಲಿ ಸರಿ ಸುಮಾರು ನೂರಾರು ಕಿಲೋಮೀಟರ್ ತನಕ ಯಾವುದೇ ಆಯಾಸವಿಲ್ಲದೆ ಸಂಚರಿಸುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಟಪಾಲು ವ್ಯವಸ್ಥೆ ಇಲ್ಲದ ಪುರಾತನ ಕಾಲದಲ್ಲಿ ಆಡಳಿತ ಅಧಿಕಾರಿಗಳು ಪರಸ್ಪರ ಸುದ್ದಿ ಸಮಾಚಾರಗಳನ್ನು ಪತ್ರ ಮೂಲಕ ರವಾನೆ ಮಾಡಲು ಈ ಪಕ್ಷಿಯನ್ನು ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.
  ▪ಬಹಳ ಸಾಧು ಜೀವಿಯಾದ ಈ ಪಕ್ಷಿಯನ್ನು ಉಪದ್ರವ ಮಾಡುವುದನ್ನು ಪ್ರವಾದಿಯವರು ವಿರೋಧಿಸಿದ್ದಾರೆ.  ಪಾರಿವಾಳವನ್ನು ಸಾಕಿ ಅದನ್ನು ಆಕಾಶಕ್ಕೆ ಹಾರಿಸಿ ಮನರಂಜನೆಗೆ ಬೇಕಾಗಿ ಆಟ ಆಡುವವನು ಬಡತನದ ರುಚಿನೋಡದೆ ಮರಣ ಹೊಂದಲಾರ ಎಂದು ಇಮಾಮ್ *ಇಬ್ರಾಹೀಮ್ ಬಿನ್ ಯಝೀದ್ ಅಲ್ ನಖೀಯೀ* (ತಾಬಿಅ್) ಯವರು ಹೇಳಿದ್ದಾರೆ.
   ▪ ಒಬ್ಬ ವ್ಯಕ್ತಿ ಒಂದು ಪಾರಿವಾಳವನ್ನು ಹಿಂಬಾಲಿಸಿ ಅದರ ಹಿಂದಿನಿಂದ ಅದನ್ನು ಆಟ ಆಡಿಸಿ ನಡೆಯುತ್ತಿರುವ ಒಂದು ದೃಶ್ಯವನ್ನು ಪ್ರವಾದಿ ಮುಹಮ್ಮದ್ (ಸ) ರು ಕಂಡಾಗ *"ಶೈತಾನನು ಶೈತಾನನನ್ನು ಹಿಂಬಾಲಿಸಿ ನಡೆಯುತ್ತಿದ್ದಾನೆ"* ಎಂದು ಹೇಳಿದರು.‌ ಈ ಹದೀಸನ್ನು ಇಮಾಮ್ *ಅಬೂ ದಾವೂದ್* ಮತ್ತು ಇಮಾಮ್ *ಬಿನ್ ಮಾಜಃ* ರಂತಹ ಹದೀಸ್ ವರದಿಗಾರರು ಸಹಾಬಿ ಅಬೂಹುರೈರರನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ. 
   ▪ ತರಬೇತಿ ಕೊಡಲ್ಪಟ್ಟ ಪಾರಿವಾಳವನ್ನು ಹಾರಾಡಿಸಿ ಅದರೊಂದಿಗೆ ಆಟವಾಡುವಾಗ ಆ ಪಕ್ಷಿಯ ಮುದ್ದು ಮುದ್ದಿನ ಚಲನವಲನಗಳಿಗೆ  ಮಂಕಾಗದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಕೊನೆಗೆ ಆ ಆಟದ ದುರಭ್ಯಾಸ  ಅಥವಾ ಅದರ ದುಶ್ಚಟಕ್ಕೆ ಆತ ಬಲಿಯಾಗುತ್ತಾನೆ. ಈ ಮನರಂಜನೆಯಲ್ಲಿ ಮುಳುಗುವ ಒಬ್ಬನಿಗೆ ನಮಾಝ್ ಕೂಡ ಖಳಾ ಆಗುತ್ತದೆ. ಆ ಕಾರಣಕ್ಕಾಗಿರಬಹುದು  ಪ್ರವಾದಿಯವರು ಪಾರಿವಾಳವನ್ನು ಶೈತಾನನಿಗೆ ತುಲನೆ ಮಾಡಿದ್ದು ಎಂದು ಹದೀಸಿನ ವ್ಯಾಖ್ಯಾನಗಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಪಾರಿವಾಳವನ್ನು ಆಕ್ಷೇಪಣೆ ಮಾಡಿದ್ದಲ್ಲ.
   ▪ಮನರಂಜನೆಗೆ ಬೇಕಾಗಿ ಮನೆಯಲ್ಲಿ ಪಾರಿವಾಳವನ್ನು ಸಾಕುವುದು *ಕರಾಹತ್* ಆಗಿದೆ. ಮಾತ್ರವಲ್ಲ ತಸವ್ವುಫಿನ ಉಲಮಾಗಳಲ್ಲಿ ಕೆಲವರು  ನಿಷಿದ್ಧವೆಂದೂ ಹೇಳಿದ್ದಾರೆ. ಪಾರಿವಾಳವನ್ನು ಆಕಾಶಕ್ಕೆ ಹಾರಾಡಿಸಿ ಆಟವಾಡುವುದನ್ನು ಪ್ರವಾದಿಯವರು ವಿರೋಧಿಸಿದ್ದಾರೆ. ಮಾಂಸಕ್ಕಾಗಿ ಸಾಕಿ ವ್ಯಾಪಾರ ಮಾಡುವುದು ಹಲಾಲ್ ಆಗಿರುತ್ತದೆ. ಅದರ ಕಿಲಿಕಿಲಿಸುವ ಇಂಪಾದ ಕೂಗಿನಿಂದ ಸುಬ್‌ಹಿಯಂತಹಾ ನಮಾಜಿಗೆ ಎಚ್ಚರವಾಗಲಿಕ್ಕೆ ಕಾರಣವಾಗುತ್ತದೆ ಎಂದಾದರೆ ಮನೆಯಲ್ಲಿ ಸಾಕುವುದರಲ್ಲಿ ವಿರೋಧವಿಲ್ಲ. ಅಲ್ಲಿಯೂ ಒಂಟಿಯಾಗಬಾರದು ಎಂಬ ನಿರ್ದೇಶ ಇಸ್ಲಾಂ ನೀಡುತ್ತದೆ.
    ▪ಒಮ್ಮೆ ಅಲಿ (ರ) ರು ಪ್ರವಾದಿ ಸನ್ನಿದಿಗೆ ಬಂದು ಹೇಳಿದರು. *"ಓ ಪ್ರವಾದಿಯವರೇ, ನನಗೆ ಮನೆಯಲ್ಲಿ ಒಂಟಿಯಾಗಿರುವಾಗ ಕೆಲವೊಮ್ಮೆ ಬೋರ್ ಹೊಡೆಯುತ್ತದೆ. ಅದಕ್ಕೆ ಏನಾದರು ಚಿಕಿತ್ಸೆ ಉಂಟಾ...?"* ಆಗ ಪ್ರವಾದಿಯವರು ಹೇಳಿದರು. *"ನೀವು ಒಂದು ಜೋಡಿ (ಒಂದು ಗಂಡು ಒಂದು ಹೆಣ್ಣು) ಪಾರಿವಾಳವನ್ನು ಮನೆಯಲ್ಲಿ ಸಾಕಿರಿ. ಅದರ ಇಂಪಾದ ಕೂಗು ಏಕಾಂತವಾಗಿರುವಾಗ ನಿಮ್ಮ ಮನಸ್ಸಿಗೆ ಸಮಾದಾನ ನೀಡುತ್ತದೆ. ಮಾತ್ರವಲ್ಲ ನಿಮಗೆ ನಮಾಜಿಗೆ ಎದ್ದೇಳಲು ಕೂಡ ಕಾರಣವಾಗಬಹುದು. ಅಂತೆಯೇ ಅದು ಕೂಗುವಾಗ ನಿಮಗೆ ಅಲ್ಲಾಹುವಿನಿಗೆ ತಸ್‌ಬೀಹ್ ಹೇಳಲಿಕ್ಕೂ ಹೇತುವಾಗುತ್ತದೆ"*
    ▪ ಮಾಂಸಾಹಾರಿಯಾದ ಗಿಡುಗರಂತಹ ಪಕ್ಷಿಗಳು ಇದನ್ನು ಕೊಂದು ತಿನ್ನುತ್ತದೆ. ಇಲಿಗೆ ಬೆಕ್ಕಿನ ಭಯವಿರುವಂತೆ ಪಾರಿವಾಳಕ್ಕೆ ಗಿಡುಗನೆಂದರೆ ಎಲ್ಲಿಲ್ಲದ ಭಯ.
    ▪ಪ್ರವಾದಿ (ಸ) ರಿಗೆ ಪಾರಿವಾಳವೆಂದರೆ ಬಹಳ ಇಷ್ಟ. ಮಾದಳಹಣ್ಣು, (Citron) ಹಸಿರು ಬಣ್ಣ, ಮತ್ತು ಕೆಂಪು ಬಣ್ಣದ ಪಾರಿವಾಳ ಈ ಮೂರು ವಸ್ತುಗಳನ್ನು ಪ್ರವಾದಿಯವರು ಬಹಳ ವಿಸ್ಮಯ ಮತ್ತು ಅಚ್ಚರಿಯಿಂದ ನೋಡುತ್ತಿದ್ದರೆಂದು ಇಮಾಮ್ ತಬ್‌ರಾನಿಯವರು ತನ್ನ *ಮಜ್‌ಮಃ  ಅಲ್ ಝವಾಯಿದ್* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
    ▪ ಪಕ್ಷಿಗಳಲ್ಲಿ ತನ್ನ ಸಂಗಾತಿಯೊಂದಿಗೆ ಸದಾ ಸಮಯ ಜೀವಿಸುವ ಈ ಪಾರಿವಾಳಕ್ಕೆ ಸಮಾನವಾದ ಜೀವಿ ಬೇರೊಂದಿಲ್ಲ. ಗಂಡಾದರೂ ಹೆಣ್ಣಾದರೂ ಸದಾ ಯಾವಾಗಲೂ ಸಂಗಾತಿಯೊಂದಿಗಿರುತ್ತದೆ. ಅದು ಎಷ್ಟು ದೊಡ್ಡ ಪಾರಿವಾಳ ಗುಂಪಿನಲ್ಲಾದರೂ ಪರಸ್ಪರ ಜೋಡಿಗಳು ಅವರವರ ಸಂಗಾತಿಯನ್ನು ನಿರಾಯಾಸ ತಿಳಿಯುತ್ತದೆ. ನಮ್ಮ ಕಣ್ಣಿಗೆ ಗುಂಪಲ್ಲಿ ಕಾಣುವಾಗ ಎಲ್ಲವನ್ನೂ ಒಂದೇ ತರ ವ್ಯತ್ಯಾಸವಿಲ್ಲದೆ ಕಾಣುವುದಾದರೂ ಆ ಪುಟ್ಡ ಪಕ್ಷಿಗೆ ಅದನ್ನು ತಿಳಿಯುವ ಸೂಕ್ಷ್ಮ ಜ್ಞಾನವನ್ನು ಅಲ್ಲಾಹನು ಕೊಟ್ಟಿದ್ದಾನೆ. ಗಂಡ ಹೆಂಡತಿಯರಂತೆ ಜೀವಪರ್ಯಂತ ಸಾಯುವ ತನಕ ಅಥವಾ ಇನ್ಯಾವುದೇ ಕಾರಣಗಳಿಂದ ಬೇರ್ಪಡುವ ತನಕ ಗಂಡು ಮತ್ತು ಸಂಗಾತಿ ಹೆಣ್ಣು ಪಾರಿವಾಳ ಒಟ್ಟಿಗೆಯೇ ಇರುತ್ತದೆ. ತನ್ನ ಸಂಗಾತಿ ಗಂಡು ಪಾರಿವಾಳ ಲೈಂಗಿಕ ಸಂಪರ್ಕಕ್ಕೆ ಕೆಲವೊಮ್ಮೆ ನಿರಾಕರಿಸಿದರೆ ಹೆಣ್ಣು ಪಾರಿವಾಳ ತಾನು ಕಲಿತ ಎಲ್ಲಾ ಕಸರತ್ತುಗಳನ್ನು ಗಂಡನ ಎದುರಲ್ಲಿ ಪ್ರದರ್ಶಿಸಿ ಹೇಗಾದರೂ ಮಾಡಿ ಗಂಡನನ್ನು ತನ್ನ ಬಲೆಯಲ್ಲಿ ಹಾಕುತ್ತದೆ. ಹೆಣ್ಣು ಪಾರಿವಾಳ ತನ್ನ ಮರಿಯೊಂದಿಗೆ ಗೂಡಲ್ಲಿರುವ ಸಮಯದಲ್ಲಿರುವಾಗ ಗಂಡು ಪಾರಿವಾಳಕ್ಕೆ ಹೆಣ್ಣನ್ನು  ಬೇಕೆಂದಾದರೆ ತಾತ್ಕಾಲಿಕ ಮರಿಗಳನ್ನು ಗೂಡಿನಿಂದ ಹೊರಹಾಕಿಯಾದರೂ ಲೈಂಗಿಕ ಸಂಪರ್ಕದಲ್ಲಿ ಏರ್ಪಡುತ್ತದೆ.
     ▪ಪ್ರವಾದಿ ನೂಹ್ (ಅ)ರವರ ಹಡಗು ತಿಂಗಳುಗಟ್ಟಲೆ ಜಲಪ್ರವಾಹ ಭೂಮಿಯಲ್ಲಿ ಚಲಿಸಿ ಕೊನೆಗೆ ಮಳೆ ಕಡಿಮೆಯಾಗಿ ನೀರಿನ ಮಟ್ಟ ಕುಗ್ಗಿದರೂ ಆಕಾಶ ಮತ್ತು ಭೂಮಿಯ ಮಧ್ಯೆ ಮೋಡಕವಿದ ವಾತಾವರಣವಿದ್ದು ಪ್ರವಾದಿ ನೂಹ್ (ಅ) ರಿಗೆ ತನ್ನ ಹಡಗನ್ನು ದಡ ಮುಟ್ಟಿಸುವ ಜಾಗ ಎಲ್ಲೆಂದು ತಿಳಿಯದೆ ಹೋಯಿತು. ಆಗ ಅವರು ಹಡಗಿನಲ್ಲಿರುವ ಕಾಗೆಯನ್ನು ಕರೆದು ಹೇಳಿದರು. *"ನೀನು ಒಂದು ಸುತ್ತು ಸುತ್ತಿ ಎಲ್ಲಾದರು ನೀರು ಬತ್ತಿದ ಜಾಗ ಕಾಣುತ್ತದೆಯಾ ಎಂದು ನೋಡಿ ಬಾ"* "ಪರವಾಗಿಲ್ಲ. ನೋಡಿ ಬರುತ್ತೇನೆ"  ಎಂದು ಹೇಳಿ ಹೊರಟ ಕಾಗೆ ನೀರಿನಲ್ಲಿ ತೇಲಿ ಬರುತ್ತಿರುವ ಶವವೊಂದು ದೊರೆತಾಗ ಅದನ್ನೇ ತಿನ್ನುವುದರಲ್ಲಿ ತಲ್ಲೀನನಾಗಿ ಬರುವಾಗ ತಡವಾಯಿತು. ಆಗ ನೂಹ್ (ಅ) ಹಡಗಿನಲ್ಲಿದ್ದ ಪಾರಿವಾಳವನ್ನು ಕರೆದು ನೋಡಿಬರಲು ಹೇಳಿದರು. ಪಾರಿವಾಳ ಹೇಳಿತು. *"ನಾನು ನೋಡಿ ಬರುತ್ತೇನೆ. ಆದರೆ, ನೋಡಿಬಂದು ಲ್ಯಾಂಡಿಂಗ್ ಜಾಗ ತೋರಿಸಿಕೊಟ್ಟರೆ ನೀವು ನನಗೆ ಜೀವಪರ್ಯಂತ ಮರೆಯಲಾಗದ ಬೇರೆ ಪಕ್ಷಿಗಳಿಂದ ನನ್ನನ್ನು ಬೇರ್ಪಟ್ಟು ಕಾಣುವ ಒಂದು ಉಡುಗೊರೆ ನನಗೆ ಕೊಡಬೇಕು."* ಪ್ರವಾದಿ ನೂಹ್ (ಅ) ಕೇಳಿದರು. *"ಅದೇನು ಉಡುಗೊರೆ..?"* ಪಾರಿವಾಳ ಹೇಳಿತು. *"ನನ್ನ ಕೊರಳಿಗೆ ಒಂದು ಚಂದದ ಹಾರ ಬೇಕು."* ಎಂದು ಷರತ್ತು ಮಾಡಿ ಪಾರಿವಾಳ ಜಾಗ ಹುಡುಕಿ ಹಾರಿತು. ತುಂಬಾ ಸುತ್ತಾಟದ ನಂತರ ನೀರು ಬತ್ತಿದ ಜಾಗ ಪಾರಿವಾಳದ ಗಮನಕ್ಕೆ ಬಂತು. ಮಾತ್ರವಲ್ಲ ನೂಹ್ (ಅ)ರಿಗೆ ದೃಢ ನಂಬಿಕೆ ಬರಲು ಮತ್ತು ಪುರಾವೆಗೆ ಬೇಕಾಗಿ ನೀರು ಬತ್ತಿದ ಕೆಸರು ಮಣ್ಣಿರುವ ಜಾಗದಲ್ಲಿ ಈ ಪಾರಿವಾಳವು ತನ್ನ ಕಾಲುಗಳನ್ನು ಮುಳುಗಿಸಿ ಆ ಹಸಿ ಕೆಸರಿನೊಂದಿಗೆ ನೂಹ್ (ಅ) ರ ಸನ್ನಿಧಿಗೆ ಬಂತು. ಸಂತೋಷಗೊಂಡ ನೂಹ್ (ಅ) ರು ಉಡುಗೊರೆ ಅಥವಾ ಒಂದು ಪುರಸ್ಕಾರವೆಂಬಂತೆ ಅದರ ಕೊರಳಿಗೆ ಹಾರ ಹಾಕಿದರು.‌ ಆ ಹಾರವಾಗಿರುತ್ತದೆ ನಾವಿಂದು ಪಾರಿವಾಳದ ಕೊರಳಲ್ಲಿ ಕಾಣುವುದು.
    ▪ಪ್ರವಾದಿವರ್ಯರು ಹಿಜ್‌ರಾ ಹೋದಾಗ ಅವರು ಅವಿತು ಕುಳಿತ ಗುಹೆಯ ದ್ವಾರವನ್ನು ಜೇಡ ಬಲೆಮಾಡಿ  ಮುಚ್ಚಿದಂತೆ ಎರಡು  ಪಾರಿವಾಳಗಳು ಗುಹೆಯ ದ್ವಾರದಲ್ಲೇ ಗೂಡು ಕಟ್ಟಿದ್ದವು. ಜನವಾಸವಿರುವಲ್ಲಿ ಪಾರಿವಾಳ ಗೂಡು ಕಟ್ಟದು ಎಂದು ಭಾವಿಸಿದ ಶತ್ರುಗಳು ಅಲ್ಲಿಂದ ಮುಂದೆ ಸಾಗಿದರು. ಇಂದು ನಾವು ಮಕ್ಕಾದಲ್ಲಿ ಪವಿತ್ರ ಹರಮಿನ ಸುತ್ತಲೂ ಸುತ್ತಾಡುವ ಪಾರಿವಾಳ ಈ ಎರಡು ಪಾರಿವಾಳದ ಸಂತಾನವಾಗಿದೆ. ಆದ್ದರಿಂದ ಈ ಪಾರಿವಾಳಗಳನ್ನು ಕೊಲ್ಲುವುದು ಮತ್ತು ದ್ಸಬಹ್ ಮಾಡಿ ತಿನ್ನುವುದೂ ಹರಾಮ್ ಆಗಿದೆ. ಈ ಪಾರಿವಾಳಗಳು ಹಗಲು ಹೊತ್ತು *ಕ‌ಅಬಾ* ಮತ್ತು ಹರಮ್ ಮಸೀದಿಯನ್ನು ಪ್ರದಕ್ಷಿಣೆ ಮಾಡುವುದಾದರು ಆ ಪವಿತ್ರ ಸ್ಥಳಗಳಲ್ಲಿ ಎಲ್ಲೂ ವಿಸರ್ಜಿಸಿ ಕೊಳಕು ಮಾಡುವುದಿಲ್ಲ. ಮಾತ್ರವಲ್ಲ, ಅಲ್ಲೆಲ್ಲೂ ಗೂಡು ಕಟ್ಟದೆ ರಾತ್ರಿಯಾಗುವಾಗ ಪರಿಸರದಲ್ಲಿರುವ ತಮ್ಮ ತಮ್ಮ ಗೂಡುಗಳಿಗೆ ಹೋಗುತ್ತದೆ...!
  ▪ಮೂಗಿನಿಂದ ರಕ್ತಸ್ರಾವ ಆಗುವ ಖಾಯಿಲೆಯಿಂದ ಬಳಲುವವರು ಪಾರಿವಾಳದ ರಕ್ತದಿಂದ ಒಂದೆರಡು ಹನಿ  ಮೂಗಿಗೆ ಕೆಲವು ದಿನಗಳ ಕಾಲ ಹಾಕಿದರೆ ಈ ಖಾಯಿಲೆ ವಾಸಿಯಾಗುತ್ತದೆ.
   ▪ ಬೆಂಕಿಯಿಂದ ಸುಟ್ಟ ಗಾಯವಾದರೆ ತೆಂಗಿನ ಎಣ್ಣೆ ಮತ್ತು ಪಾರಿವಾಳದ ರಕ್ತವನ್ನು ಮಿಶ್ರಣ ಮಾಡಿ ಆ ಜಾಗಕ್ಕೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಅದು ಗುಣವಾಗುತ್ತದೆ.
     ▪ಮೂತ್ರ ಸರಿಯಾಗಿ ಹೋಗದೆ ಅಡಚಣೆ ಇರುವವರು ಪಾರಿವಾಳದ ಪಿಟ್ಟೆಯನ್ನು ನೀರಿಗೆ ಹಾಕಿ ಅದನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಸಮಯ ಕುಳಿತರೆ ಮೂತ್ರವು ಯಾವುದೇ ಅಡಚಣೆ ಇಲ್ಲದೆ ಹೊರ ಬರುತ್ತದೆ. ಕೆಲವೊಮ್ಮೆ‌   ಕುಳಿತ ಪಾತ್ರೆಯಿಂದ ಏಳುವುದಕ್ಕಿಂತ ಮೊದಲೇ ಅವನರಿಯದೆಯೇ ಮೂತ್ರ ಹೊರಬರಬಹುದು. ಈ ಚಿಕಿತ್ಸೆ ಅಷ್ಟಕ್ಕೂ ಪರಿಣಾಮಕಾರಿ ಮತ್ತು ಫಲಕಾರಿಯಾಗಿರುತ್ತದೆ.
   ▪ಪಾರಿವಾಳದ ಮಾಂಸ ತಿನ್ನುವುದರಿಂದ ಶರೀರದಲ್ಲಿ ರಕ್ತದ ಅಂಶ ಹೆಚ್ಚಾಗುತ್ತದೆ. ಮಾತ್ರವಲ್ಲ ಕಿಡ್ನಿಯನ್ನು ಸ್ವಚ್ಛ ಗೊಳಿಸುತ್ತದೆ. ಆಗಾಗ್ಗೆ ಪಾರಿವಾಳ ಮಾಂಸ ತಿನ್ನುವವನಿಗೆ  ಉರಿಮೂತ್ರ, ಮೂತ್ರಕಲ್ಲು ಮುಂತಾದ ಕಿಡ್ನಿ ಸಂಬಂಧವಾದ ಯಾವ ಖಾಯಿಲೆಯೂ ಬಾರದು.
     ▪ಒಬ್ಬನು ಅವನು ಸಾಕುವ ಪಾರಿವಾಳ ಗೂಡಿನಿಂದ ಹೊರಗೆ ಹಾರಿ ಹೋಗಿ ಮತ್ತೆ ವಾಪಸು ಬಾರದ ಕನಸನ್ನು ಕಂಡರೆ ಅವನ ಪತ್ನಿ ಮತ್ತು ಅವನೆಡೆಯಲ್ಲಿ ಬಿರುಕು ಉಂಟಾಗಿ ಪತ್ನಿಯ ತಲಾಕ್ ಆಗುವ ಅಥವಾ ಹತ್ತಿರದಲ್ಲೇ ಅವಳು ಮರಣ ಹೊಂದುವಳು ಎಂಬುದರ ನಿಶಾನೆಯಾಗಿದೆ.
  ▪ಪಾರಿವಾಳವು ಅವನನ್ನು ಸುತ್ತಿ ಹಾರಾಡುವ ಕನಸು ಕಂಡರೆ ಮುಂದೆ ಅವನ ಜೀವನ ಐಶ್ವರ್ಯ ಮತ್ತು ಸಮೃದ್ಧಿಯಿಂದ ಕೂಡಿ ಬಹಳ ನೆಮ್ಮದಿದಾಯಕ ಮತ್ತು ಆರಾಮವಾಗಿರುತ್ತದೆ ಎಂಬುದರ ಸಂಕೇತವಾಗಿದೆ.
      ▪ಪಾರಿವಾಳದ ಮಾಂಸವನ್ನು ತಿನ್ನುವುದು ಇಸ್ಲಾಮಿನಲ್ಲಿ ಹಲಾಲ್ ಆಗಿದೆ.

     ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಮತ್ತು  ತಾಬಿಯೀ ಪಂಡಿತ ಅಲ್ಲಾಮಾ ಬಿನ್ ಸೀರೀನ್ ರ *ತಫ್‌ಸೀರುಲ್ ಅಹ್‌ಲಾಮ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...