Skip to main content

ಕಾರಾಗ್ರಹದ ಕತ್ತಲೆ ಕೋಣೆಯಲ್ಲಿ ಜಗತ್ತನ್ನು ಬೆಳಗಿಸಲು ನಿಮಿತ್ತವಾದ ಮಿಕ್ಕ ಆಲೋಚನೆಗಳು

2020 ದೇಶದಾದ್ಯಂತ ಕೋರೋನ ವೈರಸ್ ನಿಮಿತ್ತ ಲಾಕ್‌ಡೌನ್ ಘೋಷಿಸಲಾಗಿತ್ತು. ನಿನ್ನೆ ತನಕ ಹೊರ ಜಗತ್ತಿನಲ್ಲಿ ವಿಹರಿಸುತ್ತಿದ್ದ, ಶಹರದ ಗದ್ದಲದಲ್ಲಿ ಕರಗಿ ಹೋಗುತ್ತಿದ್ದ, ಬೆರೆತು ಬದುಕುವ ಕಲೆಯನ್ನೇ ಕರಗತ ಮಾಡಿಕೊಂಡಿದ್ದ ಜನಕ್ಕೆ ಈ ಮನೆಯ ಏಕತಾನತೆ ರೇಜಿಗೆ ಹುಟ್ಟಿಸದಿರುತ್ತಾ..? ಯಾಂತ್ರಿಕ ಮತ್ತು ವ್ಯಾವಹಾರಿಕ ಲೋಕದಲ್ಲಿ ಮಗ್ನನಾಗಿದ್ದ ಮನುಷ್ಯನನ್ನು ಕ್ಷಣದೊಳಗೆ ಈ ವಿಲಕ್ಷಣ ಏಕಾಂತ ಆವರಿಸುವಾಗ ಉಂಟಾಗುವ ಆ ನೋವು, ಯಾತನೆಗಳಿದೆಯಲ್ಲಾ..? ಅದು ಅಸಹನೀಯವೇ ಸರಿ.

 ನಮ್ಮದೇ ಮನೆ ಆಗ ಸೆರೆಮನೆಯಾಗಿತ್ತು. ಒಂಥರಾ ಕಾರಾಗೃಹದ ಫೀಲಿಂಗು. ಸಜೆಯಿಲ್ಲದಿದ್ದರೂ ಮರ್ಧಿಸಲ್ಪಡುವಷ್ಟು ಯಾತನೆ. ಆದರೆ ನೆನಪಿಡಿ.  ಇಡೀ‌ ಜಗತ್ತನ್ನು ಬೆಳಗಿಸಲು ನಿಮಿತ್ತವಾದ ಮಿಕ್ಕ ಆಲೋಚನೆಗಳು ಕವಲೊಡೆದದ್ದೂ ಇದೇ ಕಾರಾಗೃಹದ ಕತ್ತಲ ಕೋಣೆಯಲ್ಲೇ.!

ಇಬ್ನು ಸೀನಾ ವೈದ್ಯ ಜಗತ್ತಿನ ಅನಭಿಷಿಕ್ತ ದೊರೆ. ತನ್ನ ಅಪ್ರತಿಮ ವಿದ್ವತ್ತಿನಿಂದ ಇಂದಿಗೂ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಮರಿಸಲ್ಪಡುತ್ತಿರುವ ಮುಸ್ಲಿಂ ವಿಜ್ಞಾನಿ. ಖಲೀಫಾ ಸಂಶ್ ಅದ್ದೌಲರವರ ಆಡಳಿತದ ಅವಧಿಯಲ್ಲಿ ವೈದ್ಯ ಪ್ರಮುಖರೂ, ಮಂತ್ರಿಯೂ ಆಗಿದ್ದರು ಇಬ್ನು ಸೀನಾ. ಖಲೀಫಾರ ಮರಣದ ಬಳಿಕ ಕೆಲವು ರಾಜಕೀಯ ದುರುದ್ದೇಶಗಳಿಂದಾಗಿ ಹಮದಾನ್‌ನ ಖಲೀಫಾ ಅವರನ್ನು ಬಂಧಿಸಿ ಜೈಲಿಗಟ್ಟಿದರು. ಧೃತಿಗೆಡದ ಇಬ್ನು ಸೀನಾ ಜೈಲಿನಲ್ಲಿ ಹಲವು ಪುಸ್ತಕಗಳನ್ನು ಬರೆದರು. ಜೀವಶಾಸ್ತ್ರ, ವೈದ್ಯಶಾಸ್ತ್ರ ಮತ್ತು ಔಷಧಗಳಿಗೆ ಸಂಬಧಿಸಿದ ಪುಸ್ತಕಗಳಾಗಿತ್ತವು. ಕೆಲವೇ ವರ್ಷಗಳಲ್ಲಿ ಅದು ಜಗತ್ತಿನಾದ್ಯಂತ ತಲುಪಿದವು. ಈ ಕಾರಣಕ್ಕಾಗಿ  ಜೈಲಿನ ದಿನಗಳು ತನಗೆ ಅತ್ಯಂತ ಅಪ್ಯಾಯವಾಗಿತ್ತೆನ್ನುತ್ತಾರೆ ಇಬ್ನು ಸೀನಾ. ಈಗಲೂ ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕೃತಿಗಳೆಂದರೆ ಇಬ್ನು ಸೀನಾರದ್ದೇ. ವೈದ್ಯಜಗತ್ತಿನಲ್ಲಿ ಅವರು ಸೃಷ್ಟಿಸಿದ ದಾಖಲೆ ಯಾರಿಂದಲೂ ಮುರಿಯಲಾಗದ್ದು..

ಖ್ಯಾತ ತತ್ವಜ್ಞಾನಿಯೂ, ಚರಿತ್ರೆಗಾರರೂ ಆಗಿದ್ದವರು ಇಬ್ನು ಖಲ್ದೂನ್. 1364ರಲ್ಲಿ ಮೊರೊಕ್ಕೋದ ಫಾಝ್‌ನಲ್ಲಿ ಗಲಭೆಯೊಂದರಲ್ಲಿ ಇವರ ಪಾತ್ರವಿದೆಯೆಂದು ಆರೋಪಿಸಿ ಅಂದಿನ ಆಡಳಿತವು ಬಂಧಿಸಿತು. ಈ ಸಮಯದಲ್ಲಾಗಿತ್ತು ಖಲ್ದೂನ್ ತನ್ನ ವಿಶ್ವವಿಖ್ಯಾತ ಚರಿತ್ರೆ ಗ್ರಂಥವಾದ ಮುಖದ್ದಿಮದ ರಚನೆ ಆರಂಭಿಸಿದ್ದು. ಎರಡು ವರ್ಷಗಳ ಬಳಿಕ ಬಂಧಮುಕ್ತರಾದ ಬಳಿಕ ಈ ಗ್ರಂಥವನ್ನು ಪೂರ್ಣಗೊಳಿಸಿದರು‌.

 ಮುಸ್ಲಿಂ ಜಗತ್ತಿನ ಇಂಜಿನಿಯರ್ ಎಂದೇ ಗುರುತಿಸಲ್ಪಟ್ಟ‌ ಇಬ್ನು ಹೈತಂ ಬಹುಮುಖ ಪ್ರತಿಭೆಯಾಗಿದ್ದರು. ವಿಜ್ಞಾನದ ಸರ್ವಸ್ಥರದಲ್ಲೂ ಛಾಪು ಮೂಡಿಸಿದ್ದ ಹೈತಂ ಗಣಿತ, ಖಗೋಳಶಾಸ್ತ್ರ, ತತ್ವಜ್ಞಾನ, ರಸಾಯನಶಾಸ್ತ್ರದಲ್ಲಿ ಅಗ್ರಗಣ್ಯರಾಗಿದ್ದರು.
ಕ್ರಿ.ಶ 1000ದ ಸಮಯಕ್ಕೆ ನೈಲ್ ನದಿಯಲ್ಲಿ ಭೀಕರ ಪ್ರವಾಹ ಉಂಟಾಯಿತು. ಈ ಪ್ರವಾಹಕ್ಕೆ ಇಡೀ ಈಜಿಪ್ಟ್ ನಲುಗಿ ಹೋಯಿತು. ಇದನ್ನು ನಿವಾರಿಸಲು ಅಣೆಕಟ್ಟು ನಿರ್ಮಾಣಕ್ಕಾಗಿ ಫಾತ್ವಿಮೀ ಖಲೀಫಾ ಹಾಕಿಂರವರು ಹೈತಂರನ್ನು ಕರೆಸಿದರು‌. ಕೈರೋ ತಲುಪಿದ ಅವರು ಪ್ರತಿಷ್ಠಿತ ವಿದ್ಯಾಸಂಸ್ಥೆ ಅಲ್ ಅಝ್‌ಹರ್ ಯುನಿವರ್ಸಿಟಿಯ ಬಳಿ ನೆಲೆಸಿದರು. ಆದರೆ ನಿರ್ಮಾಣದಲ್ಲಿ ಉಂಟಾದ ಕೆಲವು ತಾಂತ್ರಿಕ ದೋಷದಿಂದಾಗಿ ಫಾತ್ವಿಮೀ ಆಡಳಿತವು ಅವರನ್ನು ಜೈಲಿಗಟ್ಟಿತು. ಕ್ಷಮಾಪಣೆ ಕೋರಿದ ಮೇಲೆ   ಗೃಹಬಂಧನ ವಿಧಿಸಿದರು. ಹೊರಜಗತ್ತಿನ ಸಂಪರ್ಕ ಕಡಿದು ಮನೆಯಲ್ಲಿ ಕುಳಿತ ಹೈತಂರಲ್ಲಿ ಹೊಸ ಆಲೋಚನೆಗಳು ಕವಲೊಡೆದವು.   ಗ್ರೀಕ್, ಪರ್ಶಿಯನ್ ಸಮೇತ ಹಲವು ಪುಸ್ತಕಗಳನ್ನು ಅರಬಿ ಭಾಷೆಗೆ ಭಾಷಾಂತರಗೊಳಿಸಿ ಬರುವ ಆದಾಯದಿಂದ ಜೀವನಾಧಾರ ಕಂಡುಕೊಂಡರು. ಅದರಲ್ಲೂ ವಿಶೇಷವಾಗಿ ಅವರ ಮಾಸ್ಟರ್ ಪೀಸ್ ಎಂದೇ ಪ್ರಸಿದ್ದವಾಗಿರುವ 'ಕಿತಾಬುಲ್ ಮನಾಸೀರ್‌'ನ್ನು ರಚಿಸಿದ್ದೂ ಇದೇ ಸಮಯದಲ್ಲಾಗಿತ್ತು. ಜೈಲಿನಲ್ಲಿ ತನ್ನ ಬಳಿಯಿದ್ದ ಲಾಟೀನು ದೀಪವನ್ನು ಪ್ರಯೋಗ ವಸ್ತುವನ್ನಾಗಿಸಿ ಕೊಂಡ ಹೈತಂ ಪ್ರಕಾಶದ ಕುರಿತು ಅನ್ವೇಷಣೆ ನಡೆಸಿದರು. ಅದರ ಕುರಿತಾದ ವಿಚಾರ, ಚಿಂತನೆಗಳನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದರು. ನಂತರದ ಕಾಲದಲ್ಲಿ ಆವಿಷ್ಕರಿಸಲ್ಪಟ್ಟ  ಬಲ್ಬ್ ಮತ್ತು ವಿದ್ಯುತ್ ದೀಪಗಳ ಕುರಿತಾಗಿ ಈ ಗ್ರಂಥಗಳಲ್ಲಿ ಪ್ರತಿಪಾದಿಸಲಾಗಿತ್ತು. ಮತ್ತು ಅದರ ನಿರ್ಮಾಣಕ್ಕೆ ಪ್ರಧಾನ ಕಾರಣವೇ ಈ ಗ್ರಂಥವಾಗಿತ್ತು. ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಗ್ರಂಥಗಳ ಪೈಕಿ ಈ ಗ್ರಂಥವು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ.

ಅಬ್ಬಾಸಿಯಾ ಖಿಲಾಫತ್‌ನ ಅವಧಿಯಲ್ಲಿ ಜೀವಿಸಿದ್ದ ಇಬ್ನು ಮುಖ್ಲಹ್, ಅರಬಿಕ್ ಕ್ಯಾಲಿಗ್ರಫಿ(ಅಕ್ಷರ ವಿನ್ಯಾಸದ)ಯ ಪಿತಾಮಹನೆಂದು ಕರೆಯಲ್ಪಡುತ್ತಾರೆ. ಆದರೆ ಅವರ ಬದುಕು ವಿನ್ಯಾಸದಷ್ಟು ವರ್ಣರಂಜಿತವಾಗಿರಲಿಲ್ಲ. ಅಲ್ಲಿ ನೂರಾರು ಜಟಿಲತೆಗಳಿದ್ದವು. ವಿವಿಧ ಅಬ್ಬಾಸಿ ಖಲೀಫರುಗಳ ಕಾಲದಲ್ಲಿ ವಿವಿಧ ಖಾತೆಯ ಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದರೂ  ಮೂರು ಬಾರಿ ಜೈಲು ಕೂಡಾ ಸೇರಬೇಕಾದ‌ ಪ್ರಸಂಗವೂ ಅವರ ಬದುಕಿನಲ್ಲುಂಟಾಯಿತು. ಮೊದಲ ಜೈಲು ವಾಸದ ವೇಳೆ ರಾಜಕೀಯ ವಿಧ್ವೇಷದ ಹಿನ್ನಲೆಯಲ್ಲಿ ಅವರ ಬಲಕೈಯನ್ನು ಬೇರ್ಪಡಿಸಿದರು‌.  ಕುಬ್ಜರಾಗದ ಮುಖ್ಲಹ್ ತನ್ನ ಎಡಕೈ ಬಳಸಿ ವಿನ್ಯಾಸ ಸಿದ್ದಿಯನ್ನು ಕರಗತ ಮಾಡಿದರು. ಅರಬಿ ವಿನ್ಯಾಸದ ಪ್ರಪ್ರಥಮ ಕೃತಿಯಾದ 'ತುಲೂತ್' ಎಂಬ ಗ್ರಂಥವನ್ನು ಬರೆದದ್ದು ಇದೇ ಸಮಯದಲ್ಲಾಗಿತ್ತು. ಈ ಗ್ರಂಥ ಅರಬ್ ಅಕ್ಷರ ಲೋಕದ ಚಹರೆಯನ್ನೇ ಬದಲಾಯಿಸಿದ ಕೃತಿಯಾಗಿತ್ತು.

ಸಾರ್ವಜನಿಕವಾಗಿ ಅಪಮಾನಿಸಲ್ಪಟ್ಟು  ಎಡಗೈಯ್ಯನ್ನೂ, ನಾಲಗೆಯನ್ನೂ ವಿಚ್ಚೇದಿಸಿ ಮೂರನೇ ಬಾರಿಗೆ ಜೈಲಿಗೆ ಸೇರಿದರು. ಎರಡು ಕೈಗಳನ್ನು ಕಳೆದುಕೊಂಡರೂ ಧೃತಿಗೆಡದ ಆ ದೈತ್ಯ ಪ್ರತಿಭೆ ತನ್ನ ಕಾಲನ್ನೇ ಬಳಸಿ ವಿನ್ಯಾಸ ಮಾಡುವ ಕಲೆಯನ್ನು ಸ್ವಾಯತ್ತ ಪಡಿಸಿದರು. ಜೈಲಿನಲ್ಲಿ ತನ್ನ ಕಾಲಿನ ಮೂಲಕ ಇವರು ರಚಿಸಿದ 'ಅಲ್ ಖತ್ತುಲ್ ಮನ್ಸೂಬ್' ಎಂಬ ಗ್ರಂಥವು ಅರಬ್ ವಿನ್ಯಾಸ ಲೋಕದಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿದವು. ಇದರ ಹೊರತಾಗಿಯೂ ಕ್ಯಾಲಿಗ್ರಫಿಗೆ ಸಂಬಂಧಿಸಿದ ಹಲವು ಕೃತಿಗಳನ್ನು  ಕಾರಾಗೃಹದಲ್ಲೇ ರಚಿಸಿದ್ದರು. ಬಳಿಕ ಜೈಲಿನಲ್ಲೇ ವಧಿಸಲ್ಪಟ್ಟ ಆ ನತಧೃಷ್ಟ ಪ್ರತಿಭೆ ತನ್ನ 56ನೇ ವರ್ಷಕ್ಕೆ  ಬದುಕು ಮುಗಿಸಿದರು.

ಅಷ್ಟೇಕೆ..
 ನಮ್ಮ ನೆಹರು ಗ್ಲಿಂಪ್ಸೆಸ್ ಆಫ್ ವರ್ಲ್ಡ್ ಹಿಸ್ಟರಿ ರಚಿಸಿದ್ದೂ ಸೆರೆಮನೆಯಲ್ಲೇ. ಕಾರಾಗೃಹದ ಇಕ್ಕಟ್ಟಾದ ಗೋಡೆಗಳ ನಡುವೆ ಇಡೀ ಜಗತ್ತಿನ ವಿಶಾಲ ಚರಿತ್ರೆಯನ್ನು ಒಂದು ಮುಷ್ಟಿಯಲ್ಲಿಟ್ಟು ಕಟ್ಟಿಕೊಟ್ಟಿದ್ದರು ನೆಹರು. ಈ ಜಗತ್ತಿನ ದಿಕ್ಕನ್ನೇ ಬದಲಾಯಿಸಿದ ಚಿಂತನೆ, ಆಲೋಚನೆ, ಮತ್ತು ಗ್ರಂಥಗಳ ಪೈಕಿ ಬಹುತೇಕವೂ ರಚನೆಗೊಂಡದ್ದು, ಆವಿರ್ಭವಿಸಿದ್ದೂ ಬಂಧೀಖಾನೆಯಲ್ಲೇ ಆಗಿದೆ

   ~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...