Skip to main content

ಮಾನವನೆಂಬ ಅದ್ಭುತ ಜೀವಿ..

ಮಾನವನೆಂಬ ಅದ್ಭುತ ಜೀವಿ..

*ಭಾಗ    👉 1*

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


   ▪ *ಪವಿತ್ರ* ಖುರ್‌ಆನಿನಲ್ಲಿ ಅಲ್ಲಾಹನು  *"ಮನುಷ್ಯ, ಮನುಷ್ಯರು"* (الانسان، الانس، أناس، الناس) ಎಂಬ ಪದಗಳನ್ನು ಸುಮಾರು ನೂರಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಬಳಸಿದ್ದಾನೆ. ಮಾತ್ರವಲ್ಲ *"ಆದಮನ ಸಂತತಿಯನ್ನು ನಾವು ಗೌರವಿಸಿದ್ದೇವೆ. ನಾವು ಸೃಷ್ಟಿದವುಗಳ ಪೈಕಿ ಹೆಚ್ಚಿನವರಿಗಿಂತಲೂ ಅವರಿಗೆ ನಾವು ಹೆಚ್ಚು ಶ್ರೇಷ್ಠತೆಯನ್ನು ದಯೆಪಾಲಿಸಿದ್ದೇವೆ. ‌ಮನುಷ್ಯನನ್ನು ನಾವು ಬಹಳ ಅಂದವಾದ ರೂಪದಲ್ಲಿ ಸೃಷ್ಟಿಸಿದ್ದೇವೆ."* ಇತ್ಯಾದಿ ಪವಿತ್ರ ಖುರ್‌ಆನಿನ ಸೂಕ್ತಗಳು ಮಾನವನ ಸ್ಥಾನಮಾನವನ್ನು ಸೂಚಿಸುತ್ತದೆ. ಉಲಮಾಗಳ ಅಭಿಪ್ರಾಯದಂತೆ ಮನುಷ್ಯನಷ್ಟು ಚಂದದ ಜೀವಿಯನ್ನು ಅವನು ಸೃಷ್ಟಿಸಿಲ್ಲ ಎಂದಾಗಿದೆ.
   ▪ *ಅಲ್ಲಾಹನು* ಮನುಷ್ಯಪಿತಾ ಹಝ್ರತ್ ಆದಮ್ (ಅ) ರನ್ನು ಸೃಷ್ಟಿಸಲು ಬಯಸಿದಾಗ *"ನಾನು ನಿನ್ನಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸಲು ಸ್ವಲ್ಪ ಮಣ್ಣು ತೆಗೆಯುತ್ತೇನೆ. ಆ ಮನುಷ್ಯನ ಸಂತತಿಗಳಲ್ಲಿ ಕೆಲವರು ಸ್ವರ್ಗಕ್ಕೂ ಕೆಲವರು ನರಕಕ್ಕೂ ಹೋಗುವರು"* ಎಂದು ಭೂಮಿಗೆ ಸಂದೇಶ ಕಳುಹಿಸಿದ್ದನು. ತನ್ನ ದೇಹದ ಮಣ್ಣಿನಿಂದ ಸೃಷ್ಟಿಸಲ್ಪಡುವ ಒಂದು ಜೀವಿಯು ನರಕ ಪ್ರವೇಸುವುದೆಂದು ತಿಳಿದಾಗ ಭೂಮಿಯು ಉಸಿರುಗಟ್ಟಿ ಅಳಲು ಶುರುಮಾಡಿತು. ಆ ತಡೆಯಲಾರದ ಸಂಕಟದ ಕಾರಣದಿಂದ ಭೂಮಿಯು ಒಡೆದು ನದಿಗಳ ಮತ್ತು ತೋಡುಗಳ ಉಗಮವಾಯಿತು. ಆ ತನಕ ಭೂುಮಿಯಲ್ಲಿ ನದಿ ಮತ್ತು ತೋಡುಗಳಿರಲಿಲ್ಲ. ಬೇಸರಗೊಂಡ ಭೂಮಿಯನ್ನು *" ನೀನು ಬೇಸರ ಪಡಬೇಡ. ನಿನ್ನಿಂದ ಸೃಷ್ಟಿಸುವ ಜೀವಿಯನ್ನು ಮರಣ ಹೊಂದಿದರೆ ಬಹಳ ಗೌರವದ ರೂಪದಲ್ಲಿ ಸ್ನಾನ ಮಾಡಿಸಿ ಸುಗಂಧ ಹಾಕಿ ನಿನಗೆಯೇ ವಾಪಾಸು ಕೊಡುತ್ತೇನೆ"* ಎಂದು ಅಲ್ಲಾಹನು ಸಮಾಧಾನಿಸಿದಾಗ ಭೂಮಿಯ ಅಳು ನಿಂತಿತು. ನಂತರ ಭೂಮಿಯ ಎಲ್ಲಾ ಭಾಗಗಳಿಂದಲೂ ಕಪ್ಪು, ಬಿಳಿ, ಕೆಂಪು ಮುಂತಾದ ಎಲ್ಲಾ ಬಣ್ಣಗಳಲ್ಲಿರುವ ಮೃದುವಾದ, ಒರಟಾದ, ಗಟ್ಟಿಯಾದ ಎಲ್ಲಾ ನಮೂನೆಯ ಮಣ್ಣುಗಳನ್ನು ತರಲು ಅಲ್ಲಾಹನು ಮಲಕುಗಳಿಗೆ ನಿರ್ದೇಶ ಕೊಟ್ಟನು. ಬಳಿಕ ಮಳೆ ಸುರಿಸಿ ಆ ಮಣ್ಣನ್ನು ಕುಂಬಾರಣ ಮಡಿಕೆ ಮಾಡುವ ಮಣ್ಣಿನಂತೆ ಮಾಡಲಾಯಿತು. ಆ ಜೇಡಿಮಣ್ಣನ್ನು ಆದಮರ ಶರೀರ ಮಾಡುವ ಮೊದಲು ಹಾಗೆಯೇ ಹದ ಬರಲು ಪರಲೋಕದ ನಲವತ್ತು ದಿನಗಳ ಕಾಲ ಇಡಲಾಯಿತು. ನಂತರ ಆದಮರ ಶರೀರವನ್ನು ಸೃಷ್ಟಿಸಲಾಯಿತು. ಇಲ್ಲಿ‌ ಗಮನಾರ್ಹ ಸಂಗತಿಯೆಂದರ, ಭೂಮಿಯ ಎಲ್ಲಾ ಕಡೆಗಳಿಂದ ಎಲ್ಲಾಬಣ್ಣದ ಎಲ್ಲಾ ಜಾತಿಯ ಮಣ್ಣನ್ನು ಮಿಶ್ರಣ ಮಾಡಿ ಆದಮರನ್ನು ಸೃಷ್ಟಿಸಿದ ಕಾರಣ ಮಾನವ ಕುಲದಲ್ಲಿ ಜನಿಸುವ ಮನುಷ್ಯರ ಬಣ್ಣದಲ್ಲಿ ಮತ್ತು ಸ್ವಭಾವದಲ್ಲಿ ಸ್ಥಳ ಮತ್ತು ಜಾಗಕ್ಕೆ ಅನುಗುಣವಾಗಿ ಬದಲಾವಣೆಯಿರುತ್ತದೆ.
   ▪ *ಆದಮರನ್ನು*  ಎಲ್ಲಿ ಸೃಷ್ಟಿಸಲಾಯಿತೆಂಬುದರ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಒಂದನೇ ಆಕಾಶದಲ್ಲಿ ಎಂದೂ, ಸ್ವರ್ಗ ನರಕದ ಎಡೆಯ ಒಂದು ಜಾಗದಲ್ಲೆಂದೂ, ಭೂಮಿಯಲ್ಲಿ ಎಂದೂ ಅಂತೆಯೇ ಅದಲ್ಲದ ಬೇರೆ ಜಾಗದಲ್ಲೆಂದೂ ಹಲವಾರು ಅಬಿಪ್ರಾಯಗಳಿವೆ. ಮಾತ್ರವಲ್ಲ ಮಾಡಲ್ಪಟ್ಟ ಮಣ್ಣಿನ ರೂಪವನ್ನು ಅಲ್ಲಾಹನು ರೂಹ್ ಹಾಕದೆ ನೂರಾರು ವರ್ಷಗಳು ಹಾಗೆಯೇ ಪ್ರದರ್ಶನಕ್ಕೆ (DISPLAY) ಇಟ್ಟಿದ್ದನೆಂದು ಹೇಳಲಾಗುತ್ತದೆ.
   ▪. *ಜೀವವಿಲ್ಲದ* ಬರೀ ಮಣ್ಣಿನಿಂದ ಮಾಡಿದ ಈ ತನಕ ಕಣ್ಣಿಗೆ ನೋಡಿ ಪರಿಚಯವಿಲ್ಲದ, ಐನೂರು ಅಡಿ ಉದ್ದವಿರುವ ಒಂದು ರೂಪವನ್ನು‌ ಕಾಣುವಾಗ ಮಲಕುಗಳು ಅಚ್ಚರಿಪಡುತ್ತಿದ್ದರು. ಮಲಕುಗಳೊಂದಿಗಿದ್ದ ಇಬ್‌ಲೀಸನು ಇದನ್ನು ನೋಡಿ *"ಅಲ್ಲಾಹನು ಇದನ್ನು ಯಾಕೆ ಸೃಷ್ಟಿಸಿದ್ದು ಅಂತ ತಿಳಿಯುವುದಿಲ್ಲ."* ಎಂದು ಹೇಳುತ್ತಿದ್ದನು. ಒಂದು ದಿನ ಆತನು ಆ ಆದಮರ ಮಾಡಿಟ್ಟಿದ್ದ ಜೀವವಿಲ್ಲದ ರೂಪಕ್ಕೆ ಒಂದು ಹೊಡೆತ ಹೊಡೆದನು. ಹೊಡೆದು ನೋಡುವಾಗ ಒಳಗೆ ಟೊಳ್ಳಾದ ವಸ್ತುವಿಗೆ ಹೊಡೆದಾಗ ಬರುವ ಶಬ್ಧ ಬಂತು. ಕೂಡಲೇ ಆತ ಅದನ್ನು ದೃಢೀಕರಣ ಮಾಡಲು ಅದರ ಬಾಯಿಯಿಂದ ಹೊಕ್ಕಿ ಗುದದ್ವಾರದ ಮೂಲಕ ಹೊರಬಂದನು. ನಂತರ *"ಈಗ ನನಗೆ ನೂರಕ್ಕೆ ನೂರು ದೃಡವಾಯಿತು. ಇದು ಹೆಚ್ಚು ಕಾಲ ಬಾಳಿಕೆ ಬರುವ ವಸ್ತುವಲ್ಲ. ಒಳಗೆ ಟೊಳ್ಳಾದ ಈ ಕಳಪೆ ವಸ್ತು ಯಾವಾಗ ಮುರಿದು ಬೀಳುತ್ತದೆ ಎಂದು ನೋಡಬೇಕು. ಏನೇ ಆದರೂ ಇವನಿಗೆ ಎಷ್ಟು ಸ್ಥಾನ ಕೊಡುವುದಾದರೂ ಇವನಿಗಿಂತ ಕೆಳಗೆ ಕೂರುವ ಸಂಗತಿಯಿಲ್ಲ. ನೋಡುವ ಏನೆಲ್ಲಾ ನಡೆಯುತ್ತದೆ ಎಂದು. ಒಂದು ಪಕ್ಷ ಇವನಿಗೆ ಅಲ್ಲಾಹನು ನನಗಿಂತ ಹೆಚ್ಚಿನ ಸ್ಥಾನಮಾನ ಕೊಟ್ಟರೆ ಇವನ ಕತೆ ಮುಗಿಸಬೇಕು "* ಎಂದು ಹೇಳಿ ಆ ಜಿವವಿಲ್ಲದ ಶರೀರದ ಹೊಟ್ಟೆಗೆ ಉಗುಳಿ ಅಲ್ಲಿಂದ ಹೋದನು.
   ▪ *ಇಬ್‌ಲೀಸನು* ಉಗುಳಿದ ಆ ಆತನ ಕೊಳಕು ಸ್ಪರ್ಶವಾದ ಜಾಗವನ್ನು ನಂತರ ಹಝ್ರತ್ ಜಿಬ್‌ರೀಲ್ (ಅ) ರಲ್ಲಿ ಅಲ್ಲಾಹನು ಕೊರೆದು ತೆಗೆಯಲು ಹೇಳಿದನು. ನಿಜವಾಗಿ ಆ ಶರೀರ ರೂಪದಲ್ಲಿ ಆಗ ಹೊಕ್ಕುಳು ಇರಲಿಲ್ಲ. ಈ ಕೊರೆದ ಜಾಗ ಬಳಿಕ ಹೊಕ್ಕುಳಾಗಿ ಬದಲಾವಣೆಯಾಯಿತು. ಅಲ್ಲದೆ ಹೊಕ್ಕುಳು ಒಂದು ದ್ವಾರ ಕೂಡ ಅಲ್ಲ. ಕೆಲವರು ಇದನ್ನು ಒಂದು ದ್ವಾರವಾಗಿ ಎಣಿಸುತ್ತಾರೆ. ಅದು ತಪ್ಪು. ಮನುಷ್ಯ ಶರೀರದ ತಲೆಯಲ್ಲಿ ಏಳು ಮತ್ತು ಕೆಳ ಭಾಗದ ದೇಹದಲ್ಲಿ ಎರಡು ದ್ವಾರಗಳಿವೆ. ನಂತರ ಆ ಕೊರೆದು ತೆಗೆದ ಮಣ್ಣಿನಿಂದ ಜಗತ್ತಿನ  ಪ್ರಥಮ ನಾಯಿಯನ್ನು ಸೃಷ್ಟಿಸಲಾಯಿತು. ಆ ಕಾರಣದಿಂದ ನಾಯಿಗೆ ಮೂರು ವಿಷೇಶತೆಗಳಿವೆ. ಮನುಷ್ಯನಂತೆಯೇ ಮಣ್ಣಿನಿಂದ ಸೃಷ್ಟಿಸಿದ ಕಾರಣ ಅದು ಯಾವಾಗಲೂ ಮನುಷ್ಯನ ಕಾವಲುಗಾರನಾಗಿಯೂ ಮನುಷ್ಯನಾದ ಯಜಮಾನನೊಂದಿಗೆ ಬೆರೆತು ಬಾಳುವುದನ್ನು ಇಷ್ಟಪಡುತ್ತದೆ. ಆ ಮಣ್ಷಿಗೆ ಹಝ್ರತ್ ಜಿಬ್‌ರೀಲ್ (ಅ) ರವರ ಕೈ ಸ್ಪರ್ಶವಾದ ಕಾರಣ ಮಲಕುಗಳ ಸ್ವಭಾವವಾದ ನಿದ್ರೆ ಇಲ್ಲದಿರುವುದು ಇದಕ್ಕೂ ಇದೆ. ಯಜಮಾನನಿಗೆ ಬೇಕಾಗಿ ಎಷ್ಟೋ ದಿನಗಳು ಬೇಕಾದರೂ ನಿದ್ದೆಯಿಲ್ಲದೆ ಕಾಯುತ್ತದೆ. ದುಷ್ಟನಾದ ಇಬ್‌ಲೀಸನ ಉಗುಳು ಮಿಶ್ರಿತ ಮಣ್ಣು ಆದ ಕಾರಣ ಇತರ ಮೃಗಗಳಿಗೆ ಇಲ್ಲದ ಕಚ್ಚುವ ಕೆಲ ಅಭ್ಯಾಸ  ಇದಕ್ಕಿದೆ. ಕೆಲವೊಮ್ಮೆ ಹುಚ್ಚು ಹಿಡಿದು ಕಚ್ಚಿದರೆ ಕಚ್ಚಲ್ಪಡುವವನು ಮರಣಕ್ಕೆ ಕೂಡ ಈಡಾಗುತ್ತಾನೆ. ಅಲ್ಲದೆ ಮಣ್ಣಿನಿಂದ ಸೃಷ್ಟಿಸಲ್ಪಟ್ಟ ನಾಯಿ ಮುಟ್ಟಿದರೆ ಮಣ್ಣಿನಲ್ಲೇ ತೊಳೆಯಬೇಕೆಂಬ ಕಟ್ಟುನಿಟ್ಟಿನ ನಿಯಮದಲ್ಲೂ ನಾವರಿಯದ ಎಷ್ಟೋ ರಹಸ್ಯಗಳು ಅಡಗಿರಬಹುದೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
   ▪ *ಆದಮರ* ಸೃಷ್ಟಿ ಒಂದು ಜುಮಾ ದಿನದ ಅಸರಿನ ನಂತರವಾಗಿತ್ತು. ಭೂಮಿಯ ಬಾಹ್ಯ ಜಾಗದಿಂದ ಮಣ್ಣನ್ನು ತೆಗೆದು ಸೃಷ್ಟಿಸಿದ ಕಾರಣ ಅರಬಿಯಲ್ಲಿ *" ಅದೀಮ್"* ಎಂದರೆ "ಬಾಹ್ಯ ಭಾಗ"  (Surface) ಎಂದು ಅರ್ಥ ಬರುವ *"ಆದಮ್"* ಎಂಬ ಹೆಸರಿಡಲಾಯಿತು.
  ▪ *ಮಣ್ಣಿನಿಂದ* ರಚನೆ ಮಾಡಿದ ಈ ಶರೀರಕ್ಕೆ ಜೀವ ಸಿಗಲು ಅಲ್ಲಾಹನು ರೂಹಿನಲ್ಲಿ (ಆತ್ಮ) ಅದರೊಳಗೆ ಹೋಗಲು ಹೇಳಿದನು. ಆಗ ಆತ್ಮ ಹೇಳಿತು. *"ಇದೊಂದು ಬಹಳ ಇಕ್ಕಟ್ಟಾದ ಶರೀರ. ಇದರೊಳಗೆ ಹೋಗಲು ನನಗೆ ಸಾದ್ಯವಿಲ್ಲ."*  ಎರಡನೇ ಬಾರಿ ನಿರ್ದೇಶಿಸಿದಾಗಲೂ ಅದೇ ಉತ್ತರ ಕೊಟ್ಟಿತು. ಮೂರನೇ ಬಾರಿ ಅಲ್ಲಾಹನು ಹೇಳಿದನು. *"ಸಂಕಷ್ಟದಿಂದಾದರೂ ಜಬರ್ದಾಸಿನಿಂದ ಒಳಗೆ ಪ್ರವೇಸಿಸು"* ನಂತರ ರೂಹ್ ಆ ಶರೀರದ ಎಲ್ಲಾ ಕಡೆ ಹೋಗಿ ಜೀವ ಕೊಟ್ಟಿತು. ಆ ಕಾರಣದಿಂದ ಮನುಷ್ಯ ಜಡಕ್ಕೆ ರೂಹ್ ಸಿಗುವಾಗಲೂ ಶರೀರದಿಂದ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ರೂಹ್ ಹೊರ ಹೋಗುವಾಗಲೂ ನೋವು ಇರುವುದು ಖಚಿತ. ಆದಮರ ಶರೀರದ ಎಲ್ಲಾ ಅವಯವಗಳಿಗೂ ಜೀವಕೊಟ್ಟ ಆತ್ಮ , ಕೊನೆಗೆ ಮೂಗಿನ‌ ದ್ವಾರದತ್ತ ತಲುಪಿದಾಗ ಆದಮರಿಗೆ ಸೀನು ಬಂತು.. ಸೀನಿದಾಗ ಅಲ್ಲಾಹನು ಹೇಳಿದನು. *"ಆದಮರೇ, ಅಲ್ ಹಂದುಲಿಲ್ಲಾಹ್.. ಅಂತ ಹೇಳಿ"* ಕೂಡಲೇ ಅವರು "ಅಲ್ ಹಂದು ಲಿಲ್ಲಾಹ್" ಎಂದು ಹೇಳಿ ಅಲ್ಲಾಹನನ್ನು‌ ಸ್ಮರಿಸಿದರು. ಮಾನವ ಕುಲದ ಪ್ರಪ್ರಥಮ ಆರಾಧನೆಯಾಗಿತ್ತು ಅದು.
   ▪ *ಮಣ್ಣಿನಿಂದ* ಮಾಡಲ್ಪಟ್ಟ ಒಂದು ರೂಪಕ್ಕೆ ರೂಹ್ ಸಿಕ್ಕಿ ಜೀವವಿರುವ ಒಬ್ಬ ಮನುಷ್ಯನಾದ ಆದಮರಿಗೆ ಒಂದು ಅಕ್ಷರ ಕೂಡ ವಿದ್ಯೆ ಇರಲಿಲ್ಲ. ನಂತರ ಕೆಲವೇ ತಾಸುಗಳಲ್ಲಿ ಅಲ್ಲಾಹನ ಖುದುರತಿನಲ್ಲಿ ಜಗತ್ತಿನ ಪ್ರಾರಂಭದಿಂದ ಹಿಡಿದು ಅಂತ್ಯ ದಿನದ ವರೆಗೆ ಸೃಷ್ಟಿಸಲ್ಪಡುವ ಎಲ್ಲಾ ವಸ್ತುಗಳನ್ನು ಅವರೆದುರಲ್ಲಿ ಪ್ರದರ್ಶಿಸಿ ಅವರಿಗೆ ಅದರ ಹೆಸರು ಮತ್ತು ಬಳಕೆಯನ್ನು ಕಲಿಸಿ ಕೊಡಲಾಯಿತು. ಅದರಲ್ಲಿ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಬಳಸುವ ವಿಮಾನ, ರೈಲು, ಬಾಂಬ್, ಮೊಬೈಲ್, ಕಂಪ್ಯೂಟರ್‌, ವಾಟ್ಸಾಪ್ ಇತ್ಯಾದಿ ಎಲ್ಲವೂ ಇತ್ತು. ಅಲ್ಲದೆ ಅಲ್ಲಾಹನು ಅವರಿಗೆ ಜಗತ್ತಿನಲ್ಲಿ ಅಂದಿನಿಂದ ಅಂತ್ಯ ದಿನದ ತನಕ ಬಳಸಲ್ಪಡುವ ಸುಮಾರು ಏಳು ಲಕ್ಷ ಚಿಲ್ಲರೆ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ಬರೆಯಲು ಕಲಿಸಿ ಕೊಟ್ಟನು. ಅದರಲ್ಲಿ ನಮ್ಮೂರ ಕನ್ನಡ, ತುಳು, ಕೊಂಕಣಿ, ನಕ್ಕ್‌ನಿಕ್ ಮುಂತಾದ ಸ್ಥಳೀಯ ಭಾಷೆಯಿಂದ ಹಿಡಿದು ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆ ಎಲ್ಲವೂ ಇತ್ತು.
   ▪ *ಅಲ್ಲದೆ* ಅವರಿಗೆ ಮತ್ತು ಅವರ ಸಂತಾನಕ್ಕೆ ಜೀವನ ನಡೆಸಲು ಬೇಕಾದ ಜೀವನ ಮಾರ್ಗದ ಸುಮಾರು ಒಂದು ಸಾವಿರ ಮೂಲ ಕಸಬುಗಳನ್ನು ಕಲಿಸಿ ಕೊಡಲಾಯಿತು. ಅದರಲ್ಲಿ ಕೃಷಿ ಮಾಡುವುದು, ಪಾಕ ಮಾಡುವುದು, ಹೊಲಿಗೆ ಮಾಡುವುದು ಮುಂತಾದ ಕಸಬಿನಿಂದ ಹಿಡಿದು ಆಧುನಿಕ ಕಂಪ್ಯೂಟರ್‌ ಶಾಸ್ತ್ರ, ಯಂತ್ರಶಾಸ್ತ್ರ, ಶಿಲ್ಪಶಾಸ್ತ್ರ, ತಂತ್ರಜ್ಞಾನ,  ಎಲ್ಲವನ್ನೂ ಚೆನ್ನಾಗಿ ಕಲಿಸಿ ಕೊಡಲಾಯಿತು.
   ▪ *ಹಝ್ರತ್* ಆದಮ್ (ಅ) ರವರು ಕಸಬಿನಲ್ಲಿ ರೈತರಾಗಿದ್ದರು. ಹಝ್ರತ್ ನೂಹ್ (ಅ) ಬಡಿಗನಾಗಿದ್ದರು. (Carpenter) ಹಝ್ರತ್ ಇದ್‌ರೀಸ್ (ಅ) ಸಿಂಪಿಗನಾಗಿದ್ದರು.(Tailor) ಹಝ್ರತ್ ಸ್ವಾಲಿಹ್ (ಅ) ವ್ಯಾಪಾರಿಯಾಗಿದ್ದರು. ಹಝ್ರತ್ ಸುಲೈಮಾನ್ (ಅ) ರವರು ಚಕ್ರವರ್ತಿಯಾಗಿದ್ದರೂ ಸುಮ್ಮನಿರುತ್ತಿರಲಿಲ್ಲ. ರಾಜದರ್ಬಾರಿನಲ್ಲಿ ಬುಟ್ಟಿ, ಚೀಲ, ಬಾಸ್ಕೆಟ್ ಮುಂತಾದವುಗಳನ್ನು ಹೊಲಿದು ಮಾರಾಟ ಮಾಡುತ್ತಿದ್ದರು. ಅವರು ಅಧಿಕಾರದಲ್ಲಿದ್ದರೂ ಯಾವತ್ತೂ ಸರಕಾರದ ಖಜಾನೆಯಿಂದ ಸ್ವಂತ ಖರ್ಚಿಗೆ ಒಂದು ನಯಾ ಪೈಸೆಯನ್ನು ಕೂಡ ತೆಗೆಯುತ್ತಿರಲಿಲ್ಲ. ಹಝ್ರತ್ ಮೂಸಾ (ಅ), ಹಝ್ರತ್ ಶುಅ‌ಯಿಬ್ (ಅ), ಹಝ್ರತ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆಡು ಮೇಯುಸುವ ಕಸಬು ಮಾಡುತ್ತಿದ್ದರು. ಅಲ್ಲದೆ ನಮ್ಮ ಪ್ರವಾದಿಯವರು ಅದರೊಂದಿಗೆ ಒಬ್ಬ ವ್ಯಾಪಾರಿ ಕೂಡ ಆಗಿದ್ದರು. ಮಾತ್ರವಲ್ಲ ಬಿಡುವಿನ ವೇಳೆ ಮನೆಯಲ್ಲಿರುವಾಗ ಹೊಲಿಗೆ ಮಾಡಿ ಕೂಡ ಜೀವನ ಮಾರ್ಗ ನಡೆಸುತ್ತಿದ್ದರು.
   ▪  *ಪ್ರವಾದಿ* ಆದಮ್ (ಅ) ರವರ ಪತ್ನಿ ಬೀವಿ ಹವ್ವಾರನ್ನು ಎಲ್ಲಿ ಸೃಷ್ಟಿಸಲಾಯಿತೆಂಬುದರ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದರೂ ಬಲವಾದ ಅಭಿಪ್ರಾಯ ಪ್ರಕಾರ ಸ್ವರ್ಗದ ಒಳಗಾಗಿತ್ತು. ಸ್ವರ್ಗದ ಸುಖ ಬದುಕಿನಲ್ಲಿ ಕಾಲ ಕಳೆಯುತ್ತಿದ್ದ ಆದಮ್ (ಅ) ಒಂದು ದಿನ ಗಾಢವಾದ ನಿದ್ರೆಯಲ್ಲಿರುವಾಗ ಅವರ ಎಡಭಾಗದ ಪಕ್ಕೆಲುಬಿನಿಂದ ಜಗತ್ತಿನ ಪ್ರಥಮ ಮಹಿಳೆಯನ್ನು ಸೃಷ್ಟಿಸಲಾಯಿತು. ಹಝ್ರತ್ ಆದಮರು ನಿದ್ದೆಯಿಂದ ಎಚ್ಚರವಾಗಿ ನೋಡುವಾಗ ತನ್ನ ಬಳಿ ಬಹಳ ಸುಂದರಿಯಾದ ಒಬ್ಬಳು ಮಹಿಳೆ ಕುಳಿತಿದ್ದಳು. ಆದಮ್ (ಅ) ಆ ಮಹಿಳೆಯಲ್ಲಿ ಕೇಳಿದರು. *"ನೀನು ಯಾರು.? ನಿನ್ನನ್ನು ಯಾಕೆ ಸೃಷ್ಟಿಸಿದ್ದು.?"* ಆಗ ಬೀವಿ ಹವ್ವಾ ಹೇಳಿದರು. *"ನಾನು ಮಹಿಳೆ. ನಿಮಗೆ ಬಾಳ ಸಂಗಾತಿಯಾಗಿ ಅಲ್ಲಾಹನು ನನ್ನನ್ನು ಸೃಷ್ಟಿಸಿದ್ದಾನೆ"* ಆ ವೇಳೆ ಅಲ್ಲಿ ನೆರೆದಿದ್ದ ಕೆಲವು ಮಲಕುಗಳು ಹಝ್ರತ್ ಆದಮ್ ‌(ಅ) ರಲ್ಲಿ ಕೇಳಿದರು. *"ಈ ಹೆಂಗಸಿನ ಹೆಸರು ನಿಮಗೆ ಗೊತ್ತಿದೆಯಾ.?"* ಆದಮರು ಹೇಳಿದರು. *"ಗೊತ್ತಿದೆ. ಇವಳ ಹೆಸರು ಹವ್ವಾ"* ಬೀವಿ ಹವ್ವಾರ ಮುಖದ ಕೆಳ ಭಾಗದಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದ ಕೆಂಪು ಬಣ್ಣದ ಒಂದು ದೊಡ್ಡ ಮಚ್ಚೆ ಇತ್ತು. ಅರಬಿ ಭಾಷೆಯಲ್ಲಿ ಅದನ್ನು  *حوة* (ಹುವ್ವತ್) ಎಂದು ಕರೆಯುತ್ತಾರೆ. ಆ ಕಾರಣದಿಂದ ಆ ಅರ್ಥ ಸೂಚಿಸುವ ಪದವಾದ *حواء* ಎಂಬ ಹೆಸರು ಬಂತು.
   ▪. *ಬೀವಿ ಹವ್ವಾರವರು* ಸುಮಾರು ಒಂಬೈನುರ ತೊಂಬತ್ತೇಳು (997) ವರ್ಷ ಬದುಕಿದ್ದರು. ಹಝ್ರತ್ ಆದಮ್ (ಅ) ರವರ ವಫಾತಿನ ನಂತರ ಅವರು ಏಳು ವರ್ಷ ಏಳು ತಿಂಗಳು ಬದುಕಿದ್ದರು.
   ▪  *ತಾಯಿಯಿಲ್ಲದೆ* ಬರೀ ತಂದೆಯಿಂದ ಬೀವಿ ಹವ್ವಾರ ಜನನವಾದರೆ. ತಂದೆಯಿಲ್ಲದೆ ಬರೀ ತಾಯಿಯಿಂದ ಹಝ್ರತ್ ಈಸಾ (ಅ) ರವರ ಜನನವಾಯಿತು. ತಂದೆ ತಾಯಿ ಎರಡೂ ಇಲ್ಲದೆ ಹಝ್ರತ್ ಆದಮರ ಸೃಷ್ಟಿಯಾದರೆ ಆದಮರ ಇತರ ಸಂತತಿಗಳ ಜನನ ಯವತ್ತೂ ಒಂದು ತಂದೆ ಒಂದು ತಾಯಿಯಿಲ್ಲದೆ ನಡೆಯದು. ಅದು ಕೆಲವೊಮ್ಮೆ ನಿಯಮ ವಿರುದ್ಧವಾಗಿಯೂ ಆಗುವುದಿದೆ. ಆದರೂ ಇಬ್ಬರಿಲ್ಲದೆ ಮನುಷ್ಯನ ಜನನವಾಗದು.
   ▪ *ಹಝ್ರತ್* ಆದಮರಿಗೆ  ಐನೂರು ಮಕ್ಕಳಿತ್ತು. ಬೀವಿ ಹವ್ವಾರವರು ಒಂದು ಹೆರಿಗೆಯಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣನ್ನು ಅವಳಿ ಜವಳಿಯಾಗಿ ಹೆರಿಗೆ ಮಾಡುತ್ತಿದ್ದರು. ಮೊದಲಿನ ಹೆರಿಗೆಯ ಗಂಡಿಗೆ ಎರಡನೆಯ ಹೆರಿಗೆಯ ಹೆಣ್ಣನ್ನೂ ಎರಡನೆಯ ಹೆರಿಗೆಯ ಗಂಡಿಗೆ ಮೊದಲಿನ ಹೆರಿಗೆಯ ಹೆಣ್ಣನ್ನೂ ಮದುವೆ ಮಾಡಿ ಕೊಡಲಾಗುತ್ತಿತ್ತು. ಅದು ನಿಯಮ ವಿರುದ್ಧವಾಗಿರಲಿಲ್ಲ. ಅಂದಿನ ಶರೀ‌ಅತ್ ಹಾಗೆಯಾಗಿತ್ತು.
   ▪ *ಅಲ್ಲಾಹನು* ಹಝ್ರತ್ ಆದಮ್ (ಅ) ರನ್ನು ಸೃಷ್ಟಿಸಿ ಎಲ್ಲಾ ವಿದ್ಯೆಗಳನ್ನು ಕಲಿಸಿಕೊಟ್ಟು ಒಂದು ಉನ್ನತ ವಿದ್ವಾಂಸರನ್ನಾಗಿ ಮಾಡಿ ಕೊನೆಗೆ ಮಲಕುಗಳಲ್ಲಿ ಅವರಿಗೆ ಸುಜೂದು ಮಾಡಲು ಆಜ್ಞಾಪಿಸಿದನು. ಅಲ್ಲಾಹನ ಆಜ್ಞೆ ಬಂದ ಕೂಡಲೇ ಅವರೆಲ್ಲರೂ ಹಝ್ರತ್ ಆದಮರಿಗೆ ಸುಜೂದು ಮಾಡಿದರು. ಆ ಸುಜೂದಿನಲ್ಲಿ ಅವರು ನೂರು ವರ್ಷವಿದ್ದರು. ಬೇರೊಂದು ಅಭಿಪ್ರಾಯ ಪ್ರಕಾರ ಐನೂರು ವರ್ಷವಾಗಿತ್ತು. ಅದು ಕೂಡ ಪರಲೋಕದ ವರ್ಷಗಳು ಎಂದಾಗುವಾಗ ಮನುಷ್ಯನ ಊಹೆಗೆ ಕೂಡ ಎಟಕದ ಒಂದಾಗಿದೆ. ಪರಲೋಕದ ಒಂದು ದಿನವಾಗಬೇಕಾದರೆ ಇಹಲೋಕದ ಐವತ್ತು ಸಾವಿರ ವರ್ಷಗಳು ಬೇಕಾಗುವುದೆಂದು ಪವಿತ್ರ ಖುರ್‌ಆನಿನಲ್ಲೇ ಅಲ್ಲಾಹನು ಹೇಳಿರುತ್ತಾನೆ.
   ▪ *ಸುಜೂದು* ಮುಗಿದು ಮಲಕುಗಳು ತಲೆ ಎತ್ತಿದಾಗ ಇಬ್‌ಲೀಸನು ಮಾತ್ರ *"ಬೆಂಕಿಯಿಂದ ಸೃಷ್ಟಿಸಲ್ಪಟ್ಟ ನಾನು ಜೇಡಿಮಣ್ಣಿನಿಂದ ಸೃಷ್ಟಿಸಲ್ಪಟ್ಟ ಮನುಷ್ಯನಿಗೆ ಸುಜೂದು ಮಾಡುವುದಾ..?"* ಎಂದು ಹೇಳಿ ಆದಮರಿಗೆ ಬೆನ್ನು ಮಾಡಿ ನೆಟ್ಟಗೆ ನಿಂತಿದ್ದ. ಅಷ್ಟರ ತನಕ ಮಲಕುಗಳೊಂದಿಗಿದ್ದು ಉನ್ನತ ಪದವಿಯಲ್ಲಿದ್ದ ಆತ ಹಾದಿತಪ್ಪಿ ವಂಚಿತನಾಗಿದ್ದಾನೆ ಎಂದು ತಿಳಿದಾಗ ಮಲಕುಗಳು ನಾವು ವಂಚಿತರಾಗದೆ ಬಚಾವು ಆಗಿದ್ದೇವೆ ಎಂಬ ಕಾರಣದಿಂದ ಅಲ್ಲಾಹನಿಗೆ‌ ಅವನ ಆಜ್ಞೆ ಇಲ್ಲದೆಯೇ ಶುಕ್‌ರ್  (ಧನ್ಯವಾದ) ಆಗಿ ಎರಡನೇ ಸುಜೂದನ್ನು ಮಾಡಿದರು. ಆದ್ದರಿಂದ ನಾವಿಂದು ನಿರ್ವಹಿಸುವ ನಮಾಜಿನಲ್ಲಿ ರುಕೂಅ್ ,ಇಅ್‌ತಿದಾಲ್ ಮೊದಲಾದ ಕರ್ಮಗಳು ಒಂದು ಆಗಿರುವಾಗ ಸುಜೂದು ಮಾತ್ರ  ಎರಡಿರುತ್ತದೆ. ಅದಾಗಿದೆ ಅದರ ರಹ್ಮಸ್ಯ.
   ▪ *ಹಝ್ರತ್* ಆದಮರಿಗೆ ಸುಜೂದ್ ಮಾಡದ ಕಾರಣದಿಂದ ಇಬ್‌ಲೀಸನು ಅಲ್ಲಾಹನ ಕೋಪಕ್ಕೆ ಬಲಿಯಾಗಿ ಅವನ ಸನ್ನಿಧಿಯಿಂದ ಹೊರದಬ್ಬಲ್ಪಡುತ್ತಾನೆ. ಮಾತ್ರವಲ್ಲ ಬಹಳ ಸುಂದರನಾಗಿದ್ದ ಆತ ನಿಮಿಷದಲ್ಲೆ ಹಂದಿಯ ಶರೀರವೂ ಕೋತಿಯ ಮುಖವಿರುವ ಕುರೂಪಿಯಾಗುತ್ತಾನೆ. ಆತನ ಅಹಂಕಾರ ಎಷ್ಟರ ತನಕವಿದೆಯೆಂದರೆ, ಆದಮ್ (ಅ) ರವರ ವಫಾತಿನ ಬಳಿಕ ಒಮ್ಮೆ ಆತನು ಪ್ರವಾದಿಯೊಬ್ಬರಲ್ಲಿ "ನನಗೆ ತೌಬಾ ಇದೆಯಾ" ಎಂದು ಕೇಳಿದಾಗ ಅಲ್ಲಾಹನ ನಿರ್ದೇಶದಂತೆ *"ತೌಬಾ ಇದೆಯೆಂದೂ, ಕೂಡಲೇ ಆದಮರ ಖಬರಿನ ಬಳಿ ಹೋಗಿ ಸುಜೂದು ಮಾಡು"* ಎಂದು ಉತ್ತರ ಕೊಟ್ಟರು. ಈ ಉತ್ತರ ಕೇಳಿದಾಗ ಆತ  *"ಆ ವ್ಯಕ್ತಿ ಜೀವಂತವಿದ್ದಾಗ ಸುಜೂದು ಮಾಡದ ನಾನು ಅವನ ಖಬರಿಗೆ ಸುಜೂದು ಮಾಡುವುದಾ!"*  ಎಂದು ಅಹಂಕಾರದ ಉತ್ತರ ಕೊಟ್ಟನು. ಪರಲೋಕದಲ್ಲಿ ಎಲ್ಲಾ ಒಂದು ಲಕ್ಷ ವರ್ಷವಾಗುವಾಗ ಒಂದು ಬಾರಿ ಇಬ್‌ಲೀಸನನ್ನು ನರಕದಿಂದ ಹೊರತೆಗೆದು ಸ್ವರ್ಗ ಮತ್ತು ನರಕದ ಮಧ್ಯೆ ಇರುವ ಒಂದು ಜಾಗಕ್ಕೆ ತರಲಾಗುತ್ತದೆ. ಆ ವೇಳೆ ಅಲ್ಲಿಗೆ ಸ್ವರ್ಗದಿಂದ ಆದಮ್ (ಅ) ರನ್ನೂ ತರಲಾಗುತ್ತದೆ. ನಂತರ ಅವನಲ್ಲಿ ಆದಮರಿಗೆ ಸುಜೂದು ಮಾಡಲು ಅಲ್ಲಾಹನು ನಿರ್ದೇಶಿಸುವನು. ಆಗಲೂ ಆತ ಅಹಂಕಾರದಲ್ಲಿ ಸುಜೂದು ಮಾಡಲು ನಿರಾಕರಿಸುವನು.
 
*✍🏻ಮುಂದುವರಿಯುವುದು*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...