ವಿಸ್ಮಯ ತುಂಬಿದ ಜೀವಜಗತ್ತು 25
ರೋಮಾಂಚಕಾರಿ ಮೇಕೆ ಪುರಾಣ
ಬರಕತಿನ ಬದುಕು ನೀಡುವ ಆಡು.
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞0097155 3499119
▪ಆಡು ಎರಡು ವಿಧ. ಒಂದು ಮೇಕೆಯಾಡು. ಮತ್ತೊಂದು ಕುರಿಯಾಡು. ಕುರಿಯಾಡು *(ನೆಯ್ಯಾಡು)* ಎಲ್ಲಾ ವಿಷಯಗಳಲ್ಲೂ ಮೇಕೆಯಾಡಿಗಿಂತ ಶ್ರೇಷ್ಠವಾಗಿದೆ. ಕುರಿಯಾಡು ಸಾಧಾರಣ ಎರಡು ಅಥವಾ ಮೂರು ಮರಿಗಳನ್ನು ಹಾಕುವುದಾದರೆ, ಮೇಕೆಯಾಡು ಕೆಲವೊಮ್ಮೆ ಗರಿಷ್ಠ ಐದು ಅಥವಾ ಆರು ಮರಿ ಹಾಕುವುದುಂಟು. ಅಲ್ಲದೆ ಮೇಕೆ ಒಂದು ವರ್ಷದಲ್ಲಿ ಎರಡು ಬಾರಿ ಮರಿ ಹಾಕುತ್ತದೆ. ಕುರಿಯಾದರೆ ಒಂದು ಬಾರಿ ಮಾತ್ರ. ಆದರೂ ಮೇಕೆಯಾಡಿಗಿಂತ ಕುರಿಯಾಡು ಶ್ರೇಷ್ಠವಾಗಿದೆ. ಮೇಕೆಯಾಡಿನ ಸಾಕಣೆಗಿಂತ ಕುರಿಯಾಡಿನ ಸಾಕಣೆಯಲ್ಲಿ ಬರ್‌ಕತ್ ಜಾಸ್ತಿಯೆಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ.
▪ಒಂದು ಹುಲ್ಲುಗಾವಲಿನಲ್ಲಿ ಮೇಕೆ ಮತ್ತು ಕುರಿಯನ್ನು ಮೇಯಲು ಬಿಟ್ಟರೆ ಮೇಕೆ ಮೇಯ್ದ ಜಾಗದಲ್ಲಿ ಮತ್ತೆ ಹುಲ್ಲು ಚಿಗುರಲು ತುಂಬಾ ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಚಿಗುರುವುದೂ ಇಲ್ಲ. ಆದರೆ ಕುರಿ ಮೇಯ್ದ ಸ್ಥಳದಲ್ಲಿ ಚಿಗುರುತ್ತದೆ. ಇದರ ಕಾರಣವೇನೆಂದರೆ, ಮೇಕೆ ಅದರ ಬುಡದಿಂದಲೇ ಎಳೆದು ಕಿತ್ತು ತಿನ್ನುತ್ತದೆ. ಕುರಿಯಾದರೆ ಮೇಲೆ ಮೇಲಿಂದಲೇ ತುಂಡು ಮಾಡಿ ಎಳೆದು ತಿನ್ನುತ್ತದೆ. ಮೇಕೆಗೆ ರೋಮವಿರುವುದಾದರೆ ಕುರಿಗೆ ರೋಮಕ್ಕೆ ಬದಲು ಬೆಲೆ ಬಾಳುವ ಉಣ್ಣೆಯಿದೆ. ಆದರೆ ಮೇಕೆಯಾಡಿನ ಚರ್ಮವು ಕುರಿಯಾಡಿನ ಚರ್ಮಕ್ಕಿಂತ ಬೆಲೆಬಾಳುವುದಾಗಿದೆ.
▪ ಸುಮಾರು ಹತ್ತು ಹನ್ನೆರಡು ವರ್ಷ ಆಯುಷ್ಯವಿರುವ ಇವುಗಳಲ್ಲಿ ಮೇಕೆ ಗರ್ಭಧಾರಣೆಯಾಗಿ ಸಾಧಾರಣ ಐದು ತಿಂಗಳಾಗುವಾಗಲೂ ಕುರಿ ಆರು ತಿಂಗಳಾಗುವಾಗಲೂ ಮರಿಹಾಕುತ್ತದೆ.
▪ ಮೇಕೆ ಮಾಂಸವನ್ನು ಜಾಸ್ತಿಯಾಗಿ ತಿನ್ನುವುದರಿಂದ ಕಫ ಜಾಸ್ತಿಯಾಗುತ್ತದೆ. ರಕ್ತದ ನಿರ್ಮಲತೆ ಕಡಿಮೆಯಾಗಿ ಮಲಿನವಾಗುತ್ತದೆ. ಪಿತ್ತರಸದಲ್ಲಿ ತಾರುಮಾರು ಉಂಟಾಗುತ್ತದೆ. ನೆನಪುಶಕ್ತಿ ಕಡಿಮೆಯಾಗುತ್ತದೆ. ಮಾನಸಿಕ ಉದ್ವೇಗ ಜಾಸ್ತಿಯಾಗುತ್ತದೆ. ಆದರೆ ಕುರಿಯಾಡಿನ ಮಾಂಸ ತಿನ್ನುವುದರಿಂದ ಅದರ ಫಲಿತಾಂಶ ನೇರ ವಿಪರೀತವಾಗಿರುತ್ತದೆ. ಆದರೆ ಶರೀರದಲ್ಲಿ ಕೆಲವರಿಗೆ ಆಗಾಗ್ಗೆ ಉಂಟಾಗುವ ಕುರು, ಬೊಕ್ಕೆ, ಮೊಡವೆ ಇತ್ಯಾದಿ ಖಾಯಿಲೆಗಳಿಗೆ ಮೇಕೆ ಮಾಂಸ ಬಹಳ ಉತ್ತಮವಾಗಿದೆ.
▪ಸಹಾಬೀಶ್ರೇಷ್ಠ ಹಝ್ರತ್ *ಉರ್‌ವತ್ ಬಿನ್ ಅಲ್ ಜಅ್‌ದ್ ಅಲ್ ಬಾರಿಖೀ* (ರ) ರವರಲ್ಲಿ ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ದೀನಾರ್ ಕೊಟ್ಟು ಮಾರುಕಟ್ಟೆಯಿಂದ ಒಂದು ಆಡನ್ನು ಖರೀದಿ ಮಾಡಿ ಬರಲು ಹೇಳಿದರು. ವ್ಯಾಪಾರ ವಹಿವಾಟು ಮಾಡುವುದರಲ್ಲಿ ಬಹಳ ಚಾಣಾಕ್ಷರಾದ ಇವರು ಮಾರುಕಟ್ಟೆಗೆ ಹೋಗಿ ತನ್ನ ವಾಕ್ಚಾತುರ್ಯದಿಂದ ಮಾರಾಟಗಾರನನ್ನು ಪುಸಲಾಯಿಸಿ ಒಂದು ದೀನಾರಿನಲ್ಲಿ ಎರಡು ಆಡನ್ನು ಖರೀದಿಸಿದರು. ಸಾಧಾರಣ ಒಂದು ಆಡಿನ ಬೆಲೆ ಅಂದು ಒಂದು ದೀನಾರ್ ಆಗಿತ್ತು. ದಾರಿಮಧ್ಯೆ ಈ ಎರಡು ಆಡಿನಿಂದ ಒಂದು ಆಡನ್ನು ಬೇರೊಬ್ಬ ಗ್ರಾಹಕನಿಗೆ ಮಾರಾಟ ಮಾಡಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ತಲುಪಿದ ಇವರು ಒಂದು ಗಟ್ಟಿಮುಟ್ಟಾದ ಆಡು ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕೊಟ್ಟ ಒಂದು ದೀನಾರನ್ನು ಹಾಗೆಯೇ ಅವರ ಮುಂದಿಟ್ಟು ನಡೆದ ಸಂಗತಿಯನ್ನು ಸವಿಸ್ತಾರವಾಗಿ ವಿವರಿಸಿದರು.
▪ಈ ಸಹಾಬಿಯ ಈ ಲಾಭದಾಯಕ ವ್ಯಾಪಾರದಲ್ಲಿ ಸಂತೋಷಗೊಂಡ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರನ್ನು ನೋಡಿ *"ನಿನ್ನ ಎಲ್ಲಾ ವ್ಯಾಪಾರ ವಹಿವಾಟುಗಳಲ್ಲಿ ನಿನ್ನ ಕೈಗೆ ಅಲ್ಲಾಹನು ಬರಕತ್ ನೀಡಲಿ"* ಎಂದು ದುಆ ಮಾಡಿದರು. ಸುಬ್‌ಹಾನಲ್ಲಾಹ್...! ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ದುಆದ ಫಲದಿಂದ ಈ ಸಹಾಬಿ ಕಾಲಕ್ರಮೇಣ ದೊಡ್ಡ ಉದ್ಯಮಿಯಾದರು. ಮುಟ್ಟಿದ್ದೆಲ್ಲಾ ಬಂಗಾರವೆಂಬಂತೆ ಯಾವ ವ್ಯವಹಾರ ವಹಿವಾಟಿಗೆ ಕೈ ಹಾಕಿದರೂ ಲಾಭದಾಯಕವೇ ಹೊರತು ನಷ್ಟ ಎಂಬುದು ಅವರ ಪಟ್ಟಿಯಲ್ಲೇ ಇರಲಿಲ್ಲ. ಮಾತ್ರವಲ್ಲ ಹಝ್ರತ್ ಉಮರ್ (ರ) ರ ಖಿಲಾಫತ್ ಕಾಲದಲ್ಲಿ ಇರಾಕಿನ ಕೂಫಾದ ಖಾಝಿಯಾಗಿ ನಿಯುಕ್ತರಾಗಿದ್ದ ಇವರು ಅಲ್ಲಿನ ಶ್ರೀಮಂತರ ಪಟ್ಟಿಯಲ್ಲಿ ಪ್ರಪ್ರಥಮ ಸ್ಥಾನದಲ್ಲಿದ್ದರು. ತನ್ನ ಮನೆಯ ಹಟ್ಟಿಯಲ್ಲೇ ಕೋಟಿಗಟ್ಟಲೆ ಬೆಲೆ ಬರುವ ನೂರಾರು ಕುದುರೆಗಳಿದ್ದವು.
▪ಇಲ್ಲಿ ಬೇರೊಂದು ಗಮನಾರ್ಹ ಸಂಗತಿಯೆಂದರೆ, ನಾವು ಯಾವಾಗಲೂ ಮಾರುಕಟ್ಟೆಗೆ ಹೋಗಿ ಸಾಮಾನು ಖರೀದಿಸುವಾಗ ವ್ಯಾಪಾರಿ ಬರೆದಿಟ್ಟ ಹಣವನ್ನು ಕೊಟ್ಟು ಸುಬಗನಂತೆ ಸಾಮಾನು ಖರೀದಿಸಿ ಬರುವುದು ತರವಲ್ಲ. ವ್ಯಾಪಾರದಲ್ಲಿ ಗ್ರಾಹಕನಿಗೂ ಹಕ್ಕಿದೆ ಎಂದು ಇಸ್ಲಾಮ್ ಹೇಳುತ್ತದೆ. ಆದ್ದರಿಂದ ಗ್ರಾಹಕ ಅವನಿಗೆ ಎಟಕುವ ಬೆಲೆಗೆ ಕೇಳಬಹುದು. ವ್ಯಾಪಾರಿ ಒಪ್ಪುವುದಾದರೆ ವ್ಯಾಪಾರ ಸಿಂಧುವಾಯಿತು. ಗ್ರಾಹಕನಿಗೆ ಲಾಭವೂ ಆಯಿತು.
▪ಆಡಿನ ಅಥವಾ ಕುರಿಯ ವೃಷಣ, ಮೂತ್ರಜನಕಾಂಗ, ಮೂತ್ರಕೋಶ, ಶಿಶ್ನ, ಗುದದ್ವಾರದ ಭಾಗ, ಪ್ಲೀಹ, ಕಾಲಿಕ (Liver) ಮುಂತಾದ ಅವಯವಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತಿನ್ನುತ್ತಿರಲಿಲ್ಲ. ಮಾತ್ರವಲ್ಲ ಯಾವಾಗಲೂ ಎರಡು ತುಂಡು ಮಾಡಿದರೆ ಅದರಲ್ಲಿ ಮೇಲ್ಭಾಗದ ತುಂಡನ್ನು ಹೆಚ್ಚು ಇಷ್ಟಪಟ್ಟು ಸೇವಿಸುತ್ತಿದ್ದರು. ಅದನ್ನೇ ಪಸಂದು ಮಾಡುತ್ತಿದ್ದರು.
▪ರಾತ್ರಿ ಚಾಪೆಯಲ್ಲಿ ಮೂತ್ರಶಂಕೆ ಮಾಡುವವನಿಗೆ ಕುರಿಯ ವೃಷಣವನ್ನು ಸುಟ್ಟು ಕೆಲವು ಬಾರಿ ತಿನ್ನಿಸಿದರೆ ಆ ಖಾಯಿಲೆ ವಾಸಿಯಾಗುತ್ತದೆ.
▪ಹೆಣ್ಣೊಬ್ಬಳಿಗೆ ಮೊಲೆಹಾಲು ನಿಲ್ಲಿಸಬೇಕೆಂದಿದ್ದರೆ, ಗಂಡು ಕುರಿಯಾಡಿನ ಪಿತ್ತಕೋಶವನ್ನು ಜಜ್ಜಿ ಸ್ತನಗಳಿಗೆ ಸವರಿದರೆ ಮೊಲೆಹಾಲು ತಕ್ಷಣ ನಿಲ್ಲುತ್ತದೆ.
▪ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಎಲ್ಲಿಂದಲೋ ಸುಂದರವಾದ ಒಂದು ಫಲಕವನ್ನು (Medal) ಗೌರವವಾಗಿ ನೀಡಲಾಗಿತ್ತು. ಆ ಫಲಕದ ಒಂದು ಕಡೆ ಒಂದು ಕುರಿಯಾಡಿನ ಚಿತ್ರವನ್ನು ಬಿಡಿಸಲಾಗಿತ್ತು. ಕೂಡಲೇ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಪವಿತ್ರ ಕೈಯನ್ನು ಆ ಕುರಿಯ ಚಿತ್ರದ ಮೇಲಿಟ್ಟು ತೆಗೆದಾಗ ಕೆತ್ತನೆಯಿಂದ ಮಾಡಿದ ಕುರಿಯ ಮೂರ್ತಿ ಅಲ್ಲಿಂದ ಮಾಯವಾಗಿತ್ತು!!!
▪ಈ ಘಟನೆಯನ್ನು ಪ್ರಖ್ಯಾತ ಇತಿಹಾಸಗಾರ ಇಮಾಮ್ ಇಬ್‌ನು ಸಅ್‌ದ್ ಅಲ್ ಬಸರಿಯ್ಯ್ (ರ) ರು ತಮ್ಮ ತಬಖಾತುಲ್ ಕುಬ್‌ರಾ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
▪ನೀವು ಆಡಿನೊಂದಿಗೆ ಉತ್ತಮವಾಗಿ ವರ್ತಿಸಿರಿ. ಯಾವತ್ತೂ ಅದಕ್ಕೆ ತೊಂದರೆ ಮಾಡದಿರಿ. ಅದರ ಹಟ್ಟಿಯನ್ನು ಯಾವಾಗಲೂ ಕೊಳಕಿನಿಂದ ಸ್ವಚ್ಛವಾಗಿಡಿ. ಕಲ್ಲು, ಮುಳ್ಳು ಇತ್ಯಾದಿ ತೊಂದರೆ ಮಾಡುವ ವಸ್ತುಗಳಿಂದ ಅದನ್ನು ಸ್ವಚ್ಛಗೊಳಿಸಿರಿ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿರುತ್ತಾರೆ. ಮಾತ್ರವಲ್ಲ ಅಡು ಸ್ವರ್ಗದ ಮೃಗವಾಗಿದೆಯೆಂದೂ, ಅಲ್ಲದೆ ಅಡುಗಳು ಪ್ರವಾದಿಗಳ ಸಂಪತ್ತಾಗಿತ್ತೆಂದೂ ಆಡು ವ್ಯಾಪಾರದಲ್ಲಿ ಯಥೇಚ್ಛವಾಗಿ ಬರಕತ್ತಿದೆ ಎಂದೂ ಹಲವಾರು ಹದೀಸುಗಳಲ್ಲಿ ವರದಿಯಾಗಿದೆ.
▪ಹಂದಿಯು ಒಮ್ಮೆ ಮರಿ ಹಾಕುವಾಗ ಸುಮಾರು ಇಪ್ಪತ್ತರ ತನಕ ಮರಿ ಹಾಕುತ್ತದೆ. ಆಡಾದರೆ ಗರಿಷ್ಠ ಐದು ಅಥವಾ ಆರು. ಜಗತ್ತಿನಲ್ಲಿ ಆಡು ತಿನ್ನುವವರ ಸಂಖ್ಯೆಯ ಶೇಕಡಾ ಹತ್ತರಷ್ಟು ಮಂದಿ ಕೂಡ ಹಂದಿ ತಿನ್ನುವವರಿಲ್ಲ. ಆದರೂ ಆಡನ್ನು ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ತಿಂದು ಮುಗಿಸಿದರೂ ಯಾವುದೇ ದಾರಿದ್ರ‍್ಯವಿಲ್ಲ. ಆದರೆ ಹಂದಿ ಸಂತಾನ ಕಾಣಸಿಗುವುದೇ ಅಪರೂಪ. ಎಲ್ಲವೂ ಆಡಿನಲ್ಲಿ ಬರಕತ್ ಇದೆ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹೇಳಿದ ಕಾರಣದಿಂದಾಗಿದೆ.
▪ ಹನಫೀ ಮದ್‌ಹಬಿನ ಮುಖಂಡರೂ, ಪ್ರಖ್ಯಾತ ಪಂಡಿತರೂ, ಸೂಫೀವರ್ಯರೂ ಆದ ಇಮಾಮ್ ಅಬೂ ಹನೀಫ (ರ) ರ ಕಾಲದಲ್ಲಿ ಇರಾಕಿನ ಕೂಫದಲ್ಲಿ ಒಂದು ಆಡು ಕಳವಾಯಿತು. ಆಡು ಕದ್ದು ಹೋದ ವಿಷಯ ಊರಲ್ಲೆಲ್ಲಾ ಮನೆ ಮಾತಾಯಿತು. ಜೀವನದಲ್ಲಿ ಒಮ್ಮೆಯೂ ತನ್ನ ಹೊಟ್ಟೆಗೆ ಹರಾಮಿನಿಂದ ಸಂಪಾದಿಸಿದ ಒಂದು ತುತ್ತು ಆಹಾರವನ್ನೂ ಸೇವಿಸದ ಇಮಾಮ್ ಅಬೂ ಹನೀಫ (ರ) ರು ಕೂಡಲೇ ಪ್ರಾಣಿಗಳ ಬಗ್ಗೆ ಗೊತ್ತಿರುವ ಒಬ್ಬರನ್ನು ಸಮೀಪಿಸಿ, ಒಂದು ಆಡು ಗರಿಷ್ಠ ಎಷ್ಟು ವರ್ಷ ಬದುಕಬಹುದೆಂದು ವಿಚಾರಿಸಿದರರು. ಕೊನೆಗೆ ಹನ್ನೆರಡು ವರ್ಷವೆಂದು ತಿಳಿಯಿತು. ನಂತರ ಇಮಾಮರು ಈ ಕದ್ದು ಹೋದ ಆಡಿನ ಮಾಂಸ ತನ್ನ ಹೊಟ್ಟೆಗೆ ಸೇರಬಹುದಾ ಎಂಬ ಭಯದಿಂದ ಸೂಕ್ಷ್ಮತೆಗೆ ಬೇಕಾಗಿ ಹನ್ನೆರಡು ವರ್ಷ ಆಡು ಮಾಂಸ ತಿನ್ನಲಿಲ್ಲ.!!
▪ ಒಮ್ಮೆ ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರ್ (ರ) ರ ಪುತ್ರ ಹಝ್ರತ್ ಅಬ್ದುಲ್ಲಾಹ್ ಬಿನ್ ಉಮರ್ (ರ) ಮತ್ತು ಅವರ ಕೆಲವು ಸಹಪಾಠಿಗಳು ಮದೀನಾ ಶರೀಫಿನ ಒಂದು ಹೊರ ಪ್ರದೇಶದಲ್ಲಿ ಒಂದು ದೀರ್ಘ ಸಂಚಾರದಲ್ಲಿರುವಾಗ ಒಂದು ಬಯಲು ಪ್ರದೇಶದಲ್ಲಿ ಮಧ್ಯಾಹ್ನದ ಊಟಕ್ಕೆ ಕುಳಿತರು. ಎಲ್ಲರೂ ಬಹಳ ಸಂತೋಷದಿಂದ ಊಟ ಮಾಡುತ್ತಿರುವಾಗ ಒಬ್ಬ ಆಡು ಮೇಯಿಸುವ ಯುವಕ ಹಲವಾರು ಆಡುಗಳೊಂದಿಗೆ ಆ ದಾರಿಯಾಗಿ ಹೋಗುತ್ತಿದ್ದ. ಬಹಳ ಕಂಗಾಲಾಗಿ ಕಂಡ ಈ ಯುವಕನಲ್ಲಿ ಹಝ್ರತ್ ಬಿನ್ ಉಮರ್ (ರ) ಹೇಳಿದರು. *"ಮಿತ್ರಾ ಇಲ್ಲಿ ಬಾ... ಇವತ್ತಿನ ಮಧ್ಯಾಹ್ನದ ಊಟ ನಮ್ಮೊಂದಿಗಾಗಲಿ."* ಆಗ ಆ ಯುವಕ ಹೇಳಿದ. *"ಇಲ್ಲ ಸಾಹುಕಾರರೇ... ನನಗಿವತ್ತು ಉಪವಾಸ. "* ಬಿನ್ ಉಮರ್ (ರ) ಅವನಲ್ಲಿ ಕೇಳಿದರು. *" ಈ ತಡೆಯಲಾಗದ ಸುಡು ಬಿಸಿಲಿರುವ ಈ ಮರುಭೂಮಿಯಲ್ಲಿ ಆಡು ಮೇಯಿಸುವ ನಿನಗೆ ಉಪವಾಸವಾ.? "* ಕೂಡಲೇ ಆ ವ್ಯಕ್ತಿ ಹೇಳಿದ. *" ಹೌದು ಯಜಮಾನರೇ..., ಹಲವಾರು ವರ್ಷಗಳಿಂದ ಗುಲಾಮನಾದ ನಾನು ಈ ಕಷ್ಟದ ಕೆಲಸವನ್ನು ಮಾಡುತ್ತಿದ್ದೇನೆ. ಅಲ್ಲಾಹುವಿನ ದಯೆಯಲ್ಲಿ ತೊಂದರೆಯಿಲ್ಲ. ಗುಲಾಮನಾದ್ದರಿಂದ ಬೇರೆ ಜವಾಬ್ದಾರಿ ಯಾವುದೂ ಇಲ್ಲ. ಗುಡ್ಡಗಾಡಿನಲ್ಲಿ ದಿನಗಳುರುಳುತ್ತದೆ. ತುಂಬಾ ವರ್ಷಗಳಿಂದ ಒಂಟಿಯಾಗಿಯೇ ಹಗಲು ಹೊತ್ತು ಸುನ್ನತ್ ವ್ರತ ಆಚರಿಸುತ್ತಾ ಬರುತ್ತಿದ್ದೇನೆ."*
▪ಇವನು ಹೇಳುವುದು ನಿಜವಾ ಅಥವಾ ಸುಳ್ಳಾ ಎಂದು ಖಾತರಿ ಮಾಡಲು ಮತ್ತು ಇವನ ಈಮಾನನ್ನು ಒಂದು ಪರೀಕ್ಷಿಸಲು ಹಝ್ರತ್ ಬಿನ್ ಉಮರ್ (ರ) ಅವನಲ್ಲಿ ಹೇಳಿದರು. *"ನನ್ನ ಮಿತ್ರಾ... ನೀನು ಇದರಿಂದ ಒಂದು ಆಡನ್ನು ನಮಗೆ ಕೊಡು. ಅದಕ್ಕೆ ಸಮಾನವಾದ ಒಳ್ಳೆಯ ಬೆಲೆಯನ್ನು ನಾವು ನಿನಗೆ ಕೊಡುತ್ತೇವೆ. ಮಾತ್ರವಲ್ಲ ನಾವದನ್ನು ಈಗಲೇ ಚೂರಿಹಾಕಿ ಮಾಂಸಮಾಡಿ ಮಟನ್ ಬಿರಿಯಾನಿ ಮಾಡುತ್ತೇವೆ. ಬಿರಿಯಾನಿ ತಯಾರಾಗುವುದರೆಡೆಯಲ್ಲಿ ನೀನು ನಿನ್ನ ಕೆಲಸ ಮಾಡು. ನಿನ್ನ ಇಫ್ತಾರಿನ ಸಮಯವಾಗುವಾಗ ಬಿರಿಯಾನಿ ರೆಡಿಯಾಗುತ್ತದೆ. ಮಗ್ರಿಬ್‌ನ ನಂತರ ಒಟ್ಟಾಗಿ ಕುಳಿತು ಬಿಸಿಬಿಸಿ ಬಿರಿಯಾನಿ ಊಟ ಮಾಡುವ. ನಿನಗೆ ಅದರ ಬೆಲೆಯೂ ಲಭಿಸಿತು. ಉಚಿತವಾಗಿ ಬಿರಿಯಾನಿಯೂ ಆಯಿತು."*
▪ಇದನ್ನು ಕೇಳಿದ ಯುವಕ ಹೇಳಿದ. *"ಇಲ್ಲ.. ಇಲ್ಲ... ಇದು ನನ್ನದಲ್ಲ. ಇದು ನನ್ನ ಯಜಮಾನನದ್ದು.*" ಹಝ್ರತ್ ಬಿನ್ ಉಮರ್ (ರ) ಹೇಳಿದರು. *"ಯಜಮಾನನದ್ದಾದರೆ ಏನು ತೊಂದರೆ...? ಈಗ ಇದರಿಂದ ಒಂದು ಆಡು ಹೋದರೆ ಅವರಿಗೆ ಹೇಗೆ ಗೊತ್ತಾಗುವುದು...? ಇನ್ನು ಗೊತ್ತಾದರೆ ಏನು ತೊಂದರೆ..? ತೋಳ (ಚೆನ್ನಾಯಿ) ಹಿಡಿದು ಕೊಂಡು ಹೋಯಿತೆಂದು ಹೇಳಿದರೆ ವಿಷಯ ಮುಗಿಯಿತು."*
▪ಇದು ಕೇಳಿದಾಕ್ಷಣ ಬಹಳ ಗಾಬರಿಗೊಂಡ ಆತ ತನ್ನ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ಅಲ್ಲಾಹ್...ಅಲ್ಲಾಹ್.. ಎಂದು ಜೋರಾಗಿ ಹೇಳುತ್ತಾ ತನ್ನ ಯಜಮಾನನ ಮನೆಯತ್ತ ಓಡಿದನು. ಹಝ್ರತ್ ಬಿನ್ ಉಮರ್ (ರ) ಮತ್ತು ಸಂಗಡಿಗರು ಅವನನ್ನು ಹಿಂಬಾಲಿಸಿ ಓಡಿದರು. ಕೊನೆಗೆ ಮನೆ ತಲುಪಿತು. ಅಲ್ಲಾಹನನ್ನು ಭಯಪಟ್ಟು ಬಹಳ ಭಕ್ತಿಯಿಂದ ಆಡು ಮೇಯಿಸುವ ಈತನನ್ನು ಹಝ್ರತ್ ಬಿನ್ ಉಮರ್ (ರ) ಗೆ ಬಹಳ ಮೆಚ್ಚುಗೆಯಾಯಿತು. ಈ ತನಕ ಗುಲಾಮನಾಗಿ ಕೆಲಸ ಮಾಡುತ್ತಿದ್ದ ಆತನನ್ನು ಆತನ ಯಜಮಾನನಿಂದ ದುಬಾರಿ ಹಣ ಕೊಟ್ಟು ಖರೀದಿಸಿ ಅವನನ್ನು ಸ್ವತಂತ್ರನಾಗಿ ಬಿಟ್ಟು ಬಿಟ್ಟರು. ಮಾತ್ರವಲ್ಲ ಅವನ ಮುಂದಿನ ಜೀವನ ಮಾರ್ಗಕ್ಕೆ ಬೇಕಾಗಿ ಕೆಲವು ಆಡುಗಳನ್ನೂ ಖರೀದಿಸಿ ಆತನಿಗೆ ಕೊಟ್ಟರು.
▪ ಆಡು ಮತ್ತು ಕುರಿಗೆ ಕ್ರೂರ ಮೃಗಗಳ ಭಯ ಬಹಳ ಕಡಿಮೆ. ಆದರೆ ತೋಳನ ಹೆಸರು ಕೇಳಿದರೆ ಭಯದಿಂದ ನಡುಗುತ್ತದೆ. ಸಾವಿರಾರು ಆಡುಗಳು ಮತ್ತು ಕುರಿಗಳು ಅಂತೆಯೇ ಅದರ ಮರಿಗಳನ್ನು ಒಂದು ಬಯಲಿಗೆ ಮೇಯಲು ಬಿಟ್ಟರೆ ಗುಂಪಿನಲ್ಲಿರುವ ಮರಿಗಳಿಗೆ ಯಾವತ್ತೂ ತನ್ನ ಹೆತ್ತ ತಾಯಿಯನ್ನು ಅಪ್ಪಿತಪ್ಪಿ (ಮಿಸ್ಸಿಂಗ್) ಹೋಗುವುದಿಲ್ಲ. ಇಷ್ಟೊಂದು ದೊಡ್ಡ ಜಂಗುಳಿಯಲ್ಲೂ ಮೇಯುವುದರೆಡೆಯಲ್ಲಿ ಆಗಾಗ್ಗೆ ತನ್ನ ತಾಯಿಯ ಕೆಚ್ಚಲಿಗೇ ಬಾಯಿ ಹಾಕಿ ಮೊಲೆ ಕುಡಿಯುತ್ತದೆ. ಇದೆಂತಹಾ ವಿಸ್ಮಯ ತುಂಬಿದ ಜೀವಜಗತ್ತು..?
▪ಗತಕಾಲದ ಮಹಾನ್ ವ್ಯಕ್ತಿ ಹಝ್ರತ್ ಲುಕ್‌ಮಾನುಲ್ ಹಕೀಮ್ (ರ) ಒಂದು ಮಾಲಿಕನ ಮನೆಯಲ್ಲಿ ಗುಲಾಮನಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಮಾಲಿಕ ತನ್ನ ಕೆಲಸದಾಳು ಲುಕ್‌ಮಾನ್ (ರ) ರನ್ನು ಕರೆದು ಹೇಳಿದ. *"ಹೇಯ್..ಲುಕ್‌ಮಾನ್.. ಇಲ್ಲಿ ಬಾ.. ನೀನಿವತ್ತು ನನಗೆ ನಮ್ಮ ಫಾರ್ಮಿನಿಂದ ಒಂದು ಒಂದು ಒಳ್ಳೆಯ ಆಡನ್ನು ದ್ಸಬಹ್ ಮಾಡಿ ಅದರಿಂದ ಬಹಳ ಒಳ್ಳೆಯ ಭಾಗವನ್ನು ತೆಗೆದು ಪಲ್ಯ ಮಾಡಿ ಕೊಡಬೇಕು."* ಕೂಡಲೇ ಲುಕ್‌ಮಾನರು ಅಡನ್ನು ಚೂರಿಹಾಕಿ ಅದರ ನಾಲಗೆ ಮತ್ತು ಹೃದಯವನ್ನು ತೆಗೆದು ಒಳ್ಳೆಯ ಪಲ್ಯ ಮಾಡಿ ಕೊಟ್ಟರು.
▪ಕೆಲವು ದಿನಗಳ ನಂತರ ಯಜಮಾನನಿಗೆ ಈ ಲುಕ್‌ಮಾನರ ತೀಕ್ಷ್ಣ ಬುಧ್ಧಿಯನ್ನು ಪರೀಕ್ಷಿಸಲು ಮತ್ತೊಮ್ಮೆ ಕರೆದು ಹೇಳಿದರು. *"ಲುಕ್‌ಮಾನ್.. ಈ ಕಡೆ ಬಾ.. ನೀನಿವತ್ತು ಒಂದು ಆಡನ್ನು ತೆಗೆದು ದ್ಸಬಹ್ ಮಾಡಿ ಅದರ ಬಹಳ ಕೆಟ್ಟ ಅಂಗಾಂಗವನ್ನು ತೆಗೆದು ನನಗೆ ಪಲ್ಯ ಮಾಡಿ ಕೊಡಬೇಕು."* ಹಝ್ರತ್ ಲುಕ್‌ಮಾನರು ಕೂಡಲೇ ಮೊದಲಿನಂತೆಯೇ ಆಡಿನ ಹೃದಯ ಮತ್ತು ನಾಲಗೆಯ ಪದಾರ್ಥ ಮಾಡಿ ಯಜಮಾನನ ಮುಂದಿಟ್ಟರು.
▪ಪಿತ್ತ ನೆತ್ತಿಗೇರಿದ ಯಜಮಾನ ಲುಕ್‌ಮಾನ್ (ರ) ರಲ್ಲಿ ಕೇಳಿದ. *"ಓ ಪೆದ್ದಾ... ಒಳ್ಳೆಯ ಅಂಗಾಂಗವನ್ನು ಪದಾರ್ಥ ಮಾಡಿ ಬರಲು ಹೇಳಿದಾಗಲೂ, ಕೆಟ್ಟ ಭಾಗವನ್ನು ಮಾಡಿ ಬರಲು ಹೇಳಿದಾಗಲೂ ನೀನು ಹೃದಯ ಮತ್ತು ನಾಲಗೆಯನ್ನು ಬೇಯಿಸಿ ತಂದೆ. ಏನಿದು ನಿನಗೆ ತಲೆಗೆ ಏನಾದರು ಪೆಟ್ಟಾಗಿದಾ..? ಅಲ್ಲಾ ನನ್ನನ್ನು ಹಾಸ್ಯ ಮಾಡುತ್ತಿರುವೆಯಾ...?"*
▪ಹಝ್ರತ್ ಲುಕ್‌ಮಾನುಲ್ ಹಕೀಮ್ (ರ) ಹೇಳಿದರು. *"ಇಲ್ಲ ಪ್ರಭುಗಳೇ... ಖಂಡಿತ ಹಾಸ್ಯ ಮಾಡಿದ್ದಲ್ಲ. ಯಾವೊಬ್ಬನೂ ಉನ್ನತ ಪದವಿಗೆ ತಲುಪುವುದೂ ಮತ್ತು ಕೆಟ್ಟವನಾಗುವುದೂ ಈ ಎರಡು ಅಂಗಗಳ ಕಾರಣದಿಂದ. ಆದ್ದರಿಂದ ನಿಮಗೆ ಎರಡು ಬಾರಿಯೂ ಅದನ್ನೇ ಮಾಡಿ ತಂದದ್ದು."*
▪ಕುರಿಯ ಮಾಂಸ ಸಾಧಾರಣ ಆಗಾಗ್ಗೆ ತಿನ್ನುವವರಿಗೆ ವಿಷಹಾವು ಕಚ್ಚಿದರೂ ಕಚ್ಚಿದ ಕೂಡಲೇ ಅವನ ಶರೀರಕ್ಕೆ ವಿಷ ಹತ್ತದು. ಅಷ್ಟಕ್ಕೂ ಪ್ರತಿರೋಧ ಶಕ್ತಿ ಇದಕ್ಕಿದೆ. ಇದರ ಮಾಂಸದಲ್ಲಿ ಉಷ್ಣಾಂಶ ಜಾಸ್ತಿ ಇರುವುದರಿಂದ ಚಳಿಗಾಲ ಮತ್ತು ಮಳೆಗಾಲದಲ್ಲಿ ಇದರ ಸೇವನೆ ಬಹಳ ಒಳ್ಳೆಯದು. ಆದರೆ ಮೇಕೆ ಮಾಂಸ ಚಳಿಗಾಲದಲ್ಲಿ ತಿನ್ನುವುದಕ್ಕಿಂತ ಬೇಸಿಗೆಯಲ್ಲಿ ಉತ್ತಮ. ಮಾತ್ರವಲ್ಲ ಕುರಿ ಮಾಂಸ ಎಷ್ಟು ತಿಂದರೂ ಜಠರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ರಾತ್ರಿ ತಿನ್ನುವುದು ಒಳ್ಳೆಯದಲ್ಲ.
▪ಸಹಾಬಿ ಗಣ್ಯ ಹಝ್ರತ್ ಅಬ್ದುಲ್ಲಾಹ್ ಬಿನ್ ಮಸ್‌ಊದ್ (ರ) ರಿಗೆ ಬಾಲಕನಿರುವಾಗ *ಉಖ್‌ಬತ್ ಬಿನ್ ಅಬೀ ಮುಯೀತ್* ಎಂಬ ಅಮುಸ್ಲಿಮರೊಬ್ಬರ ಆಡುಗಳನ್ನು ಮೇಯಿಸುವ ಕೆಲಸವಾಗಿತ್ತು. ಒಂದು ದಿನ ಅವರು ಒಂದು ಬಯಲಿನಲ್ಲಿ ಮಾಲಿಕನ ಹಲವಾರು ಆಡುಗಳನ್ನು ಮೇಯಿಸುತ್ತಿರುವಾಗ ಆ ದಾರಿಯಾಗಿ ಪ್ರವಾದಿ ಮುಹಮ್ಮದ್ (ಸ) ಮತ್ತು ಹಝ್ರತ್ ಅಬೂಬಕರ್ ಸಿದ್ದೀಖ್ (ರ) ರು ಬರುತ್ತಿದ್ದರು. ಪ್ರವಾದಿವರ್ಯರು ಬಾಲಕ ಬಿನ್ ಮಸ್‌ಊದರಲ್ಲಿ ಹೇಳಿದರು. *"ನಾವು ತುಂಬಾ ದಣಿದು ಸುಸ್ತಾಗಿ ಬರುತ್ತಿದ್ದೇವೆ. ನಮಗೆ ಕುಡಿಯಲಿಕ್ಕೆ ಸ್ವಲ್ಪ ಹಾಲು ಸಿಗಬಹುದಾ..?"*
▪ಕೂಡಲೇ ಬಾಲಕ ಬಿನ್ ಮಸ್‌ಊದ್ (ರ) ಹೇಳಿದರು. *"ಇಲ್ಲ.. ಇಲ್ಲ... ಇದು ನನ್ನ ಸಂಪತ್ತು ಅಲ್ಲ. ಇದಕ್ಕೆ ಬೇರೊಬ್ಬರು ಮಾಲಿಕ ಇದ್ದಾರೆ. ಅವರ ಅನುಮತಿಯಿಲ್ಲದೆ ಕೊಡಲು ಸಾಧ್ಯವಿಲ್ಲ. ನಾನು ಇಲ್ಲಿ ಒಬ್ಬ ಕೆಲಸದಾಳು ಮಾತ್ರ."*
▪ಆಗ ಪ್ರವಾದಿ ಮುಹಮ್ಮದ್ (ಸ) ರು ಬಿನ್ ಮಸ್‌ಊದ್ (ರ) ರಲ್ಲಿ ಕೇಳಿದರು. *"ಅಲ್ಲ ಅಬ್ದುಲ್ಲಾ... ನಿನ್ನ ಈ ಬಯಲಿನಲ್ಲಿ ಈ ತನಕ ಗರ್ಭಧಾರಣೆಯಾಗದ ಪ್ರಾಯ ತಲುಪದ ಸಣ್ಣ ಹೆಣ್ಣು ಕುರಿ ಉಂಟಾ..? ಇದ್ದರೆ ತೆಗೆದು ಕೊಂಡು ಬಾ.."* ಬಿನ್ ಮಸ್‌ಊದ್ (ರ) ಹೇಳಿದರು. *"ಹೌದು.. ಉಂಟು ಪ್ರವಾದಿಯವರೇ.."* ನಂತರ ಪ್ರವಾದಿವರ್ಯರು ಅದನ್ನು ಒಂದು ಕಡೆ ಕಟ್ಟಿಹಾಕಿ ಅದರ ಕೆಚ್ಚಲನ್ನು ತನ್ನ ಪವಿತ್ರ ಕೈಯಿಂದ ಸವರಿ ಹಾಲಿಗೆ ಬೇಕಾಗಿ ದುಆ ಮಾಡಿದರು.
▪ ಬಿನ್ ಮಸ್‌ಊದ್ (ರ) ಹೇಳುತ್ತಾರೆ. *"ಸುಬ್‌ಹಾನಲ್ಲಾಹ್!ಈ ತನಕ ಗರ್ಭಧರಿಸಿ ಮರಿಹಾಕದ ಕುರಿಯ ಕೆಚ್ಚಲು ಹಾಲಿನಿಂದ ತುಂಬಿತು. ನಂತರ ಅಬೂಬಕರ್ ಸಿದ್ದೀಖ್ (ರ) ಒಂದು ದೊಡ್ಡ ಪಾತ್ರೆ ಎಲ್ಲಿಂದಲೋ ತಂದರು. ಅದಕ್ಕೆ ಹಾಲು ಕರೆಯಲಾಯಿತು. ಪ್ರವಾದಿಯವರು, ಹಝ್ರತ್ ಅಬೂಬಕರ್ ಸಿದ್ದೀಖ್ (ರ) ಮತ್ತು ನಾನು ಬೇಕಾದಷ್ಷು ಕುಡಿದೆವು. ನಂತರ ಪ್ರವಾದಿವರ್ಯರು ಆ ಕುರಿಯ ಕೆಚ್ಚಲಿನಲ್ಲಿ ಮೊದಲಿನಂತೆಯೇ ಆಗಲು ಹೇಳಿದರು. ಅದು ತಕ್ಷಣ ಕಿರಿದಾಯಿತು"*
▪ ಬಹಳ ಚಿಕ್ಕ ಪ್ರಾಯದಲ್ಲೇ ಇಸ್ಲಾಮ್ ಸ್ವೀಕರಿಸಿದ ಹಝ್ರತ್ ಬಿನ್ ಮಸ್‌ಊದರು ಹೇಳುತ್ತಾರೆ. *" ಈ ಘಟನೆ ಆದ ನಂತರ ನಾನು ಪ್ರವಾದಿ ಸನ್ನಿಧಿಗೆ ಹೋಗಿ ನನಗೆ ಕುರ್‌ಅನ್ ಕಲಿಸಿ ಕೊಡಲು ಹೇಳಿದೆ."* ಪ್ರವಾದಿಯವರು ಹೇಳಿದರು. *"ತೊಂದರೆಯಿಲ್ಲ. ನೀನು ಒಳ್ಳೆಯ ಕಲಿಯುವ ಬುದ್ಧಿವಂತ ಹುಡುಗ"* ಆಮೇಲೆ ನನಗೆ ಅವರು ಆ ಪವಿತ್ರ ಬಾಯಿಯಿಂದ ಎಪ್ಪತ್ತು ಪವಿತ್ರ ಕುರ್‌ಆನಿನ ಸೂರತುಗಳನ್ನು ಕಲಿಸಿ ಕೊಟ್ಟಿದ್ದರು. ಮಾತ್ರವಲ್ಲ ಅದನ್ನು ಚೆನ್ನಾಗಿ ಅವರ ಬಾಯಿಯಿಂದ ಕಲಿಯುವ ಸೌಭಾಗ್ಯ ನನಗೆ ದೊರಕಿತು. ಮಾತ್ರವಲ್ಲ ಈ ವಿಷಯದಲ್ಲಿ ನನಗೆ ಸಮಾನವಾಗಿ ನನ್ನಲ್ಲಿ ಪೈಪೋಟಿ ನಡೆಸಲು ಸಹಾಬಿಗಳಲ್ಲಿ ಯಾರೂ ಇರಲ್ಲಿಲ್ಲ.
▪ಒಮ್ಮೆ ಒಬ್ಬರು ಮಹಿಳೆ ಪ್ರವಾದಿ ಸನ್ನಿಧಿಗೆ ಬಂದು ಹೇಳಿದರು. *"ಸಣ್ಣ ಮಟ್ಟಿನಲ್ಲಿ ಆಡು ಸಾಕಣೆ ಮಾಡುತ್ತಿದ್ದೇನೆ. ಆದರೆ ಹೇಳತಕ್ಕ ಅಭಿವೃದ್ಧಿಯೇನೂ ಕಾಣುವುದಿಲ್ಲ."* ಆಗ ಪ್ರವಾದಿಯವರು ಆ ಮಹಿಳೆಯಲ್ಲಿ ಕೇಳಿದರು. *"ನೀನು ಸಾಕಣೆ ಮಾಡುವ ಆಡಿನ ಬಣ್ಣ ಯಾವುದು..?"* ಮಹಿಳೆ ಹೇಳಿದರು. *"ಕಪ್ಪು ಬಣ್ಣದ್ದು ಪ್ರವಾದಿಯವರೇ "* ಕೂಡಲೇ ಪ್ರವಾದಿ ಮುಹಮ್ಮದ್ (ಸ) ರು ಅವಳಲ್ಲಿ ಹೇಳಿದರು. *"ನೀನು ಆ ಕಪ್ಪು ಆಡುಗಳನ್ನು ಯಾರಿಗಾದರೂ ಕೊಟ್ಟು ಬಿಳಿ ಸಿಗುತ್ತದಾ ಅಂತ ನೋಡು. ಬಿಳಿಯಲ್ಲಿಯಾಗಿದೆ ಬರಕತ್ ಜಾಸ್ತಿ ಇರುವುದು."* ಅಂತೆಯೇ ಪ್ರವಾದಿಯವರು ಉಮ್ಮು ಹಾನಿಅ್ (ರ) ಎಂಬ ಸಹಾಬಿ ವನಿತೆಯಲ್ಲಿ *" ನೀನು ಆಡು ಸಾಕಣೆ ಮಾಡು. ಅದರಲ್ಲಿ ಒಳ್ಳೆ ಬರಕತ್ ಇದೆ"* ಎಂದು ಹೇಳಿದ ಹದೀಸನ್ನು *ಬಿನ್ ಮಾಜಃ* ವರದಿ ಮಾಡಿದ್ದಾರೆ.
*✒ಮುಂದುವರಿಯುವುದು*
Comments