*ಬರಾಅತ್ ಜಾವು ಬರ್ಕತ್ ಜಾವು*
📝 _ಮುನೀರ್ ಸಖಾಫಿ,ಸಾಲೆತ್ತೂರು._
______________________________________
ಅರಬೀ ತಿಂಗಳ 8 ನೇಯ ತಿಂಗಳಾಗಿದೆ ಶಅಬಾನ್ ತಿಂಗಳು.
ಆ ತಿಂಗಳ 14 ನೇ ಅಸ್ತಮಿಸಿದ 15 ನೇ ರಾತ್ರಿಯಾಗಿದೆ ಬರಾಅತ್ ರಾತ್ರಿ.
ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಲ್ಲಿ ಬರಾಅತ್ ರಾತ್ರಿಯ ಮಹತ್ವ ವಿವರಿಸಲಾಗಿದೆ.
ಬರಾಅತ್ ಎಂಬುವುದಕ್ಕೆ ಮೋಚನೆ ಎಂದಾಗಿದೆ ಅರ್ಥ.
ಆ ರಾತ್ರಿಯಲ್ಲಿ ನರಕಾಗ್ನಿಯಿಂದ ಹಲವರನ್ನು ಮೋಚಿಸಲ್ಪಡಲಾಗುತ್ತದೆ.ಆದುದರಿಂದಲೇ ಆ ರಾತ್ರಿಗೆ ಬರಾಅತ್ ರಾತ್ರಿ ಎಂಬ ಹೆಸರಿಂದ ಕರೆಯಲ್ಪಡಲಾಗುತ್ತದೆ.
ಮಾತ್ರವಲ್ಲ,
ಲೈಲತುಲ್ ಮುಬಾರಕ,ಲೈಲತುಸ್ಸಕ್ಕ್,
ಲೈಲತುರ್ರಹ್'ಮ ಎಂಬ ಹೆಸರೂ ಆ ರಾತ್ರಿಗೆ ಇದೆ.
(ರೂಹುಲ್ ಬಯಾನ್8/402)
ಅಲ್ಲಾಹನು ಹೇಳುತ್ತಾನೆ,
*ಖಂಡಿತವಾಗಿಯೂ ನಾವಿದನ್ನು ಸಮೃದ್ಧಿಯ ರಾತ್ರಿಯಲ್ಲಿ ಅವತರಣೆ ಮಾಡಿದ್ದೇವೆ.ನಿಶ್ಚಯವಾಗಿಯೂ ನಾವು ಮುನ್ಸೂಚನೆ ನೀಡುವವರಾಗಿದ್ದೇವೆ.*
*ಆ ರಾತ್ರಿಯಲ್ಲಿ ಯುಕ್ತಿ ಪೂರ್ಣವಾದ ಎಲ್ಲಾ ಕಾರ್ಯಗಳನ್ನು* *ಬೇರ್ಪಡಿಸಲ್ಪಡಲಾಗುತ್ತದೆ.*
*(ಸೂರಾ ಅದ್ದುಖಾನ್3--4)*
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾ ರಾಝೀ(ರ) ಈ ರೀತಿ ವಿವರಿಸುತ್ತಾರೆ,
ಪ್ರಸ್ತುತ ಸೂಕ್ತದಲ್ಲಿ ಹೇಳಿದ ಸಮೃದ್ಧಿಯ ರಾತ್ರಿ ಎಂಬುವುದರ ಉದ್ದೇಶ ಬರಾಅತ್ ರಾತ್ರಿಯಾಗಿದೆಯೆಂದು ಇಖ್'ರಿಮ (ರ)ಮತ್ತು ಇನ್ನಿತರರು ಹೇಳಿದ್ದಾರೆ.
ಅದು ಶಅಬಾನಿನ 15 ನೇ ರಾತ್ರಿಯಾಗಿದೆ.
(ತಫ್ಸೀರುಲ್ ಕಬೀರ್ 27/237)
ಇದೇ ರೀತಿ
*ಜಾಮಿಉಲ್ ಬಯಾನ್ ನ 25/109,
*ರೂಹುಲ್ ಮಆನಿ 13/110,
*ರೂಹುಲ್ ಬಯಾನ್8/402,
*ಅಬುಸ್ಸುಊದ್ 5/553,
*ಸ್ವಾವಿ4/60,
*ಖುರ್'ತುಬೀ16/126 ಮುಂತಾದ ಗ್ರಂಥಗಳಲ್ಲಿಯೂ ಕಾಣಬಹುದಾಗಿದೆ.
"ಯುಕ್ತಿ ಪೂರ್ಣವಾದ ಎಲ್ಲಾ ಕಾರ್ಯಗಳನ್ನು ಬೇರ್ಪಡಿಸಲ್ಪಡಲಾಗುವುದು" ಎಂಬ ಖುರ್ ಆನಿನ ಸೂಕ್ತವನ್ನು ವಿವರಿಸಿ ಇಮಾಮ್ ಖುರ್ತುಬೀ (ರ)ಹೇಳುತ್ತಾರೆ,
ಇಖ್'ರಿಮ(ರ)ಹೇಳಿದರು:ಸೂಕ್ತದಲ್ಲಿ ಹೇಳಿದ ಸಮೃದ್ಧಿಯ ರಾತ್ರಿ ಶಅಬಾನ್ ತಿಂಗಳ 15 ನೇ ದಿನವಾಗಿದೆ.ಆ ರಾತ್ರಿಯಲ್ಲಿ ಒಂದು ವರ್ಷಕ್ಕಿರುವ ಕಾರ್ಯಗಳನ್ನು ತೀರ್ಮಾನಿಸಲ್ಪಡಲಾಗುತ್ತದೆ.ಮರಣಹೊಂದುವವರ ಲಿಸ್ಟ್ ನಿಂದ ಜೀವಿಸುವವರ ಲಿಸ್ಟನ್ನು ಬೇರ್ಪಡಿಸಲಾಗುವುದು.
ಯಾರೆಲ್ಲ ಹಜ್ಜ್ ಕರ್ಮವನ್ನು ನಿರ್ವಹಿಸುವರು ಎಂದು ತೀರ್ಮಾನಿಸಲಾಗುವುದು.
ಎಲ್ಲಾ ಕಾರ್ಯಗಳನ್ನು ತೀರ್ಮಾನಿಸಲ್ಪಟ್ಟ ಬಳಿಕ ಯರನ್ನೂ ಕೂಡಾ ಸೇರಿಸಲಾಗುವುದಿಲ್ಲ ಹಾಗೂ ಕೈ ಬಿಡಲಾಗುವುದಿಲ್ಲ.
ಉಸ್ಮಾನ್ ಬಿನ್ ಮುಗೀರ(ರ) ವರದಿ; ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ಒಂದು ಶಅಬಾನಿನಿಂದ ಇನ್ನೊಂದು ಶಅಬಾನ್ ತನಕದ ಆಯುಷ್ಯವನ್ನು ನಿಶ್ಚಯಿಸಲಾಗುವುದು.
( ಖುರ್'ಥುಬೀ 16/126).
ಇಮಾಮ್ ರಾಝೀ(ರ) ಹೇಳುತ್ತಾರೆ,
ಮನುಷ್ಯರಿಗೆ ಅಲ್ಲಾಹನು ಕರುಣಿಸಿದ ಪ್ರಾಯ,ಆಹಾರ ,ನೀರು ಮುಂತಾದವುಗಳು ಒಂದೇ ರೀತಿಯಲ್ಲಿ ಅಲ್ಲ.ಈ ರೀತಿ ಮನುಷ್ಯನಿಗೆ ಕರುಣಿಸಿದ ಅಲ್ಲಾಹನು ಅವನ ಹಿಕ್ಮತ್ ನಿಂದ ಇದೆಲ್ಲವನ್ನೂ ಲೆಕ್ಕ ಮಾಡಿಟ್ಟಿದ್ದಾನೆ.ಆದುದರಿಂದಲೇ ಹಕೀಂ ಎಂಬ ಅಲ್ಲಾಹನ ವಿಶೇಷತೆಯನ್ನು ಆಲಂಕಾರಿಕವಾಗಿ ಪ್ರಸ್ತುತ ಅನುಗ್ರಹಗಳಿಗೆ ಅಲ್ಲಾಹನು ಪ್ರಯೋಗಿಸಿದ್ದಾನೆ.
(ರಾಝೀ 27/240)
*ಖದ್ರ್ ನ ರಾತ್ರಿ ಲೈಲತುಲ್ ಖದ್ರ್ ಅಲ್ಲವೇ?*
ಒಂದು ವರ್ಷದ ಲೆಕ್ಕಾಚಾರಗಳು ನಡೆಯುವುದು ರಮಳಾನಿನ ಲೈಲತುಲ್ ಖದ್ರ್ ನಲ್ಲಿ ಎಂದು ಹೇಳಿದವರೂ ಇದ್ದಾರೆ.
ಹಾಗಾದ್ರೆ ಬರಾಅತ್ ರಾತ್ರಿ ಅದು ಹೇಗೆ ನಡೆಯುವವು? ಎಂದು ಕೇಳುವವರಿದ್ದಾರೆ.
ಇಮಾಂ ರಾಝೀ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ:ಎಲ್ಲಾ ಕಾರ್ಯಗಳನ್ನು ದಾಖಲಿಸಲ್ಪಟ್ಟ ಲೌಹುಲ್ ಮಹ್ಫೂಲ್ ನಿಂದ ಒಂದು ವರ್ಷದ ಲೆಕ್ಕಾಚಾರಗಳನ್ನು ಬದಲಿಸಿ ಬರೆಯುವಾಗ ಅದನ್ನು ಬರಾಅತ್ ರಾತ್ರಿ ಆರಂಭಿಸಿ ಲೈಲತುಲ್ ಖದ್ರ್ ಆಗುವಾಗ ಬರೆದು ಪೂರ್ತಿಯಾಗುವವು ಎಂದು ಅಭಿಪ್ರಾಯಪಟ್ಟವರಿದ್ದಾರೆ.
ಆ ಪ್ರಕಾರ ಆಹಾರದ ಲಿಸ್ಟನ್ನು ಮೀಕಾಈಲ್ (ಅ)ರಿಗೂ
ಯುದ್ಧ ಮತ್ತು ಭೂಕಂಪನದ ಲಿಸ್ಟನ್ನು ಜಿಬ್ರೀಲ್(ಅ)ರಿಗೂ ಕರ್ಮಗಳ ಲಿಸ್ಟನ್ನು ಒಂದನೇ ಆಕಾಶದಲ್ಲಿರುವ ಇಸ್ಮಾಯೀಲ್ (ಅ)ರಿಗೂ ವಿಪತ್ತುಗಳ ಲಿಸ್ಟನ್ನು ಮಲಕುಲ್ ಮೌತ್ ನಿಗೂ ವಹಿಸಿಕೊಡಲಾಗುವುದು.
(ರಾಝೀ27/240
ಖುರ್'ಥುಬೀ 16/128
ರೂಹುಲ್ ಬಯಾನ್ 8/404).
ಬರಾಅತ್ ರಾತ್ರಿ ಎಂಬುವುದು ಶ ಅಬಾನ್ 15 ರಾತ್ರಿಯೆಂದು ಅದು ಬಹಳ ಸಮೃದ್ಧಿಯ ರಾತ್ರಿಯೆಂದು ಈ ವಿವರಣೆಯಿಂದ ತಿಳಿಯಿತು.
ಹದೀಸುಗಳಲ್ಲಿ ಏನಿದೆ? ನೋಡೋಣ.
1.
ಮುಆದ್ ಬಿನ್ ಜಬಲ್ (ರ)ವರದಿ:
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,ಶಅಬಾನ್ 15 ರಾತ್ರಿ ಮುಶ್ರಿಕ್ ಮತ್ತು ಸಮಸ್ಯೆಯುಂಟುಮಾಡುವವರಲ್ಲದ ಎಲ್ಲಾ ಸೃಷ್ಠಿಗಳಿಗೂ ಅಲ್ಲಾಹನ ಅನುಗ್ರಹ ಪ್ರತ್ಯಕ್ಷವಾಗುವವು ಮತ್ತು ಅವರಿಗೆಲ್ಲಾ ಅವನು ಮಾಫ್ ನೀಡುವನು.
(ತ್ವಬ್'ರಾನಿ 6776).
2.
ಜಿಬ್'ರೀಲ್ (ಅ) ನನ್ನನ್ನು ಸಮೀಪಿಸಿ ಈ ರೀತಿ ಹೇಳಿದರು:ಇದು ಶಅಬಾನ್ 15 ನೇ ರಾತ್ರಿಯಾಗಿದೆ.ಈ ರಾತ್ರಿಯಲ್ಲಿ ಕಲಬ್ ಗೋತ್ರದವರ ಆಡುಗಳ ಮೇಲಿರುವ ರೋಮಗಳ ಸಂಖ್ಯೆಯಲ್ಲಿ ಅಲ್ಲಾಹನು ನರಕದಿಂದ ಜನರನ್ನು ಮೋಚಿಸುತ್ತಾನೆ.
(ಬೈಹಖೀ)
3.
ಶಅಬಾನ್ 15 ರ ರಾತ್ರಿ ನೀವು ನಮಾಝು ಮಾಡಿರಿ ಹಾಗೂ ಅದರ ಹಗಲು ಉಪವಾಸ ಆಚರಿಸಿರಿ.
(ಇಬ್ನ್ ಮಾಜ )
4.
ಆಯಿಶಾ ಬೀವಿ ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೇಳಿದರು:
ಶಅಬಾನ್ 15 ರ ರಾತ್ರಿಗಿರುವ ಮಹತ್ವ ನಿಮಗೆ ತಿಳಿದಿದೆಯಾ?
ಆ ರಾತ್ರಿಗಿರುವ ಮಹತ್ವವಾದರೂ ಏನೆಂದು ಆಯಿಶ ಬೀವಿ ಕೇಳಿದರು.
ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು:ಈ ವರ್ಷದಲ್ಲಿ ಮರಣ ಹೊಂದುವವರ ಮತ್ತು ಜನಿಸುವವರ ಲೆಕ್ಕವನ್ನು ಈ ರಾತ್ರಿಯಲ್ಲಿ ನಿಶ್ಚಯಿಸಲಾಗುವುದು.ಮನುಷ್ಯರ ಕರ್ಮಗಳನ್ನು ಈ ರಾತ್ರಿಯಲ್ಲಿ ಅಲ್ಲಾಹನ ಬಳಿಗೆ ತಲುಪಿಸಲಾಗುವುದು.ಅವರ ಆಹಾರಗಳು ಆ ರಾತ್ರಿ ಇಳಿಯುವವು.
(ಬೈಹಖೀ)
ಇಂತಹಾ ನೂರಾರು ಹದೀಸುಗಳು ಈ ವಿಷಯದಲ್ಲಿ ಇದೆ.ಬರಾಅತ್ ರಾತ್ರಿಗೆ ಮಹತ್ವವಿದೆಯೆಂದು ಈ ಹದೀಸುಗಳಿಂದ ಬಹಳ ಸ್ಪಷ್ಟ.
ಈ ವಿಷಯದಲ್ಲಿ ಬಂದ ಹದೀಸುಗಳನ್ನು ವಿವರಿಸಿ ಕೊನೆಗೆ ಇಮಾಮ್ ಇಬ್ನ್ ಹಜರ್ (ರ)ಹೇಳುವುದು ನೋಡಿ,
ಒಟ್ಟಿನಲ್ಲಿ ಆ ರಾತ್ರಿಗೆ ಮಹತ್ವವಿದೆ ಎಂಬುವುದು ಸಂಶಯಾತೀತವಾಗಿದೆ.ಆ ರಾತ್ರಿಯಲ್ಲಿ ಪಾಪ ಮೋಚನೆ ಮತ್ತು ಪ್ರಾರ್ಥನೆಗೆ ಉತ್ತರವೂ ಲಭಿಸುವವು.ಆದ್ದರಿಂದಲೇ ಬರಾಅತ್ ರಾತ್ರಿ ಪ್ರಾರ್ಥನೆಗೆ ಉತ್ತರವಿದೆಯೆಂದು ಇಮಾಂ ಶಾಫೀಈ (ರ)ಹೇಳಿರುವುದು.
(ಅಲ್ ಫತಾವಲ್ ಕುಬ್'ರಾ2/80)
*ನೂತನವಾದಿಯ ನಾಯಕನಿಗೆ ಇದು ಸಮ್ಮತವಾಗಿದೆ.*
ನೂತನವಾದಿಗಳ ಅಂಗೀಕೃತ ನಾಯಕ ಇಬ್ನ್ ತೀಮಿಯ್ಯರ ಮಾತು ನೋಡಿ,
ಬರಾಅತ್ ರಾತ್ರಿಯ ಮಹತ್ವ ವಿವರಿಸುವ ದಾರಾಳ ಹದೀಸುಗಳು ಮತ್ತು ಆಸಾರುಗಳು ರಿಪೋರ್ಟ್ ಮಾಡಲಾಗಿದೆ.ಸಲಫ್(ಹಿಜರಿ 300 ರ ಮುಂಚಿನ ಜನರು)ಗಳ ಪೈಕಿ ಒಂದು ವಿಭಾಗ ಶಅಬಾನ್ ತಿಂಗಳ 15 ರಂದು ನಮಾಝು ನಿರ್ವಹಿಸಿದ್ದಾಗಿಯೂ ವರದಿ ಮಾಡಲ್ಪಡಲಾಗಿದೆ.ಹಾಗಾದಲ್ಲಿ ಒಬ್ಬನು ಅಂದು ನಮಾಝು ಮಾಡುವುದಾದರೆ ಸಲಫ್ ಗಳ ಚರ್ಯೆ ಆತನಿಗಿದೆ.
(ಫತಾವಾ ಇಬ್ನ್ ತೀಮಿಯ್ಯ23/80).
*ಬರಾಅತ್ ಉಪವಾಸ*
ಶಅಬಾನ್ 15 ರ ಹಗಲು ಉಪವಾಸ ಆಚರಣೆ ಸುನ್ನತ್ ಆಗಿದೆ.ಎಲ್ಲಾ ತಿಂಗಳ(ದುಲ್ ಹಿಜ್ಜ ತಿಂಗಳ 13 ನೇ ದಿನ ಹೊರತು ಪಡಿಸಿ) 13,14,15 ರಂದು ಉಪವಾಸ ಸುನ್ನತ್ ಇದೆ.
ಇಮಾಮ್ ರಂಲೀ (ರ)ರೊಂದಿಗೆ ಈ ಬಗ್ಗೆ ಕೇಳಲ್ಪಟ್ಟ ಪ್ರಶ್ನೆ ಮತ್ತು ಉತ್ತರ ನೋಡಿರಿ,
_ಶಅಬಾನ್ 15 ರ ರಾತ್ರಿ ನೀವು ನಮಾಝು ಮಾಡಿರಿ,ಹಾಗೂ ಹಗಲು ನೀವು ಉಪವಾಸ ಆಚರಿಸಿರಿ ಎಂಬ ಹದೀಸ್_ _ಇಬ್ನ್ ಮಾಜ ವರದಿ ಮಾಡಿದ್ದಾರೆ.ಅದರಲ್ಲಿ ಹೇಳುವಂತೆ 15 ರಂದು ಉಪವಾಸ ಸುನ್ನತ್ ಇದೆಯೇ?_
_ಆ ಹದೀಸ್ ಸ್ವಹೀಹ್ ಆಗಿದೆಯೇ?_
_ಯಾರಾದರು ಅದನ್ನು ಲಹೀಫ್ ಎಂದು ಹೇಳಿದ್ದಾರೆಯೇ?_
ಉತ್ತರ: _ಶಅಬಾನ್ 15 ರಂದು ಉಪವಾಸ ಆಚರಣೆ ಸುನ್ನತ್ ಆಗಿದೆ.ಶಅಬಾನ್ 13,14,15 ರಂದೂ ಕೂಡಾ ಸುನ್ನತ್ ಆಗಿದೆ.ಪ್ರಸುತ ಹದೀಸ್ ಪ್ರಮಾಣ ಯೋಗ್ಯವಾಗಿದೆ._
(ಫತಾವಾ ರಂಲೀ 2/79)
*ಬರಾಅತ್ ಮತ್ತು ಯಾಸೀನ್*
ಬರಾಅತ್ ರಾತ್ರಿ ಮಗ್ರಿಬ್ -ಇಶಾ ನಡುವೆ 3 ಯಾಸೀನ್ ಮತ್ತು ದುಖಾನ್ ಸೂರತ್ ಓದುವ ಸಂಪ್ರದಾಯವಿದೆ.ಅದು ಸಜ್ಜನರಾದ ಪೂರ್ವೀಕರು ನಮಗೆ ಕಲಿಸಿ ಕೊಟ್ಟ ಸತ್ಕರ್ಮವಾಗಿದೆ.
ಒಂದನೇಯ ಯಾಸೀನ್ ಆಯುಷ್ಯದಲ್ಲಿ ಬರಕತ್ ಗೆ ಬೇಕಾಗಿ,
2 ನೇಯದು ರಿಝ್'ಕ್ ನಲ್ಲಿ ಬರಕತ್ ಲಭಿಸಲು ,
3 ನೇಯದು ಈಮಾನ್ ಸಲಾಮತ್ ಹೊಂದಲು ಬೇಕಾಗಿಯಾಗಿದೆ.
ಬರಾಅತ್ ರಾತ್ರಿ ಪ್ರಾರ್ಥನೆಗೆ ಉತ್ತರ ಲಭಿಸುವ ಬರ್ಕತ್ ಇರುವ ರಾತ್ರಿಯೆಂದು ಈಗಾಗಲೇ ನೀವು ತಿಳಿದಂತೆ ಪ್ರಾರ್ಥಿಸುವ ಮುಂಚೆ ಖುರ್'ಆನ್ ಪಾರಾಯಣ ಮಾಡಿದಲ್ಲಿ ಆ ಪ್ರಾರ್ಥನೆ ಬಹಳ ಬೇಗನೆ ಸ್ವೀಕರಿಸುವವು ಎಂದು ಧಾರಾಳ ಹದೀಸುಗಳಲ್ಲಿ ವರದಿಯಾಗಿದೆ.
ಯಾವ ಉದ್ದೇಶವಿಟ್ಟು ಯಾಸೀನ್ ಸೂರಾ ಪಾರಾಯಣ ಮಾಡುತ್ತಾರೋ ಆ ಉದ್ದೇಶ ಆಲ್ಲಾಹನು ಈಡೇರಿಸುವನೆಂದೂ ಹದೀಸಿನಲ್ಲಿದೆ.
ಆದುದರಿಂದಲೇ ಪ್ರಾರ್ಥನೆಗೆ ಮುಂಚೆ ಯಾಸೀನ್ ಅಥವಾ ಇನ್ನಿತರ ಸೂರಾ ಪಠಿಸುವುದನ್ನು ಒಮ್ಮೆಯೂ ವಿರೋಧಿಸಕೂಡದು.
ಇಮಾಮ್ ಮುರ್ತಲ ಝಬೀದೀ(ರ) ಹೇಳುತ್ತಾರೆ,
ಬರಾಅತ್ ರಾತ್ರಿಯಂದು ಆರಾಧನಾ ಕರ್ಮಗಳಿಂದ ಧನ್ಯಗೊಳಿಸುವ ಸಂಪ್ರದಾಯ ಪೂರ್ವೀಕರಿಂದ ಬಂದ ಚರ್ಯೆಯಾಗಿದೆ.ಒಂದು ಬಾರಿ ಯಾಸೀನ್ ಓದಿ ಪ್ರಾಯದಲ್ಲಿ ಬರಕತ್ ಲಭಿಸಲು ಮತ್ತು ಎರಡನೇಯದ್ದು ಓದಿ ರಿಝ್'ಖ್ ನಲ್ಲಿ ಬರಕತ್ ಲಭಿಸಲು ಮತ್ತು ಮೂರನೇಯದ್ದು ಓದಿ ಅಂತ್ಯ ಸುಖಕರವಾಗಲು ಪ್ರಾರ್ಥಿಸಬೇಕು.
(ಇತ್'ಹಾಫ್ 3/427)
ಇದೇ ರೀತಿ ಇಮಾಮ್ ದಿಮ್ಯಾತೀ(ರ) ತನ್ನ ನಿಹಾಯತುಲ್ ಅಮಲ್ ನ 280 ರಲ್ಲೂ ವಿವರಿಸಿದ್ದಾರೆ.
ಒಟ್ಟಿನಲ್ಲಿ ಬರಾಅತ್ ಎಂಬ ಪುಣ್ಯ ದಿವಸ ಬರ್ಕತ್ ಇರುವ ,ಪ್ರಾರ್ಥನೆ ಸ್ವೀಕರಿಸಲ್ಪಡುವ ದಿನವಾಗಿದ್ದು ,ಎಲ್ಲಾ ಮಹಾತ್ಮರೂ ಅದನ್ನು ಅಂಗೀಕರಿಸಿದ್ದಾರೆ.
ಆ ದಿನ ಇಬಾದತ್ ಗಳಿಂದ ಧನ್ಯಗೊಳಿಸಿ ಪರಲೋಕದ ಮೋಕ್ಷಕ್ಕಾಗಿ ಪ್ರಾರ್ಥಿಸಿರಿ.
ನಿಮಗೂ ನಮಗೂ ಅಲ್ಲಾಹನು ಒಳಿತು ಮಾಡಲಿ.
ಆಮೀನ್
.............................................
Comments