ಕಪಟನ ಮನೆಯಂಗಳದಿಂದ ಕಾಣೆಯಾದ ಖರ್ಜೂರದ ಮರ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971553499119
▪ಪ್ರಖ್ಯಾತ ಸಹಾಬಿ ಅಬೂ ದುಜಾನಃ (ರ) ರ ಬಗ್ಗೆ ತಿಳಿಯದವರು ಯಾರೂ ಇರಲಿಕ್ಕಿಲ್ಲ. ಈ ಸಹಾಬೀ ಶ್ರೇಷ್ಠ ಮದೀನಾ ಮಸೀದಿಯಲ್ಲಿ ಯಾವಾಗಲೂ ಸುಬ್‌ಹ್ ನಮಾಝಿಗೆ ಪ್ರವಾದಿಯೊಂದಿಗೆ ಇಮಾಮ್ ಜಮಾಅತಿಗೆ ಹಾಜರಾಗುತ್ತಿದ್ದರು. ಆದರೆ ನಮಾಝ್ ಮುಗಿದ ಕೂಡಲೇ ಝಿಕ್‌ರ್ ಮತ್ತು ದುಆದಲ್ಲಿ ಭಾಗಿಯಾಗದೆ ನಮಾಝಿನ ಸಲಾಮಿನ ಬಳಿಕ ಕೂಡಲೇ ಹೋಗುತ್ತಿದ್ದರು.
▪ಹಲವಾರು ದಿನಗಳಿಂದ ಅಬೂದುಜಾನರ ಈ ಚಲನವಲನವನ್ನು ಚೆನ್ನಾಗಿ ಗಮನಿಸುತ್ತಿದ್ದ ಪ್ರವಾದಿವರ್ಯರು(ಸ) ಒಂದು ದಿನ ಅವರನ್ನು ಕರೆಸಿ ಈ ಬಗ್ಗೆ ವಿಚಾರಿಸಿದರು. *"ಅಲ್ಲಾ ಅಬೂದುಜಾನರೇ..., ನಿವ್ಯಾಕೆ ಎಲ್ಲಾ ದಿನ ಫಜ್‌ರ್ ನಮಾಝಿನ ನಂತರ ಝಿಕ್‌ರ್ ಮತ್ತು ದುಆಕ್ಕೆ ನಿಲ್ಲದೆ ಬಹಳ ಗಡಿಬಿಡಿಯಿಂದ ಓಡುತ್ತಿದ್ದೀರಿ. ಏನು ಕಾರಣ..?"* ಅಬೂದುಜಾನರು ಹೇಳಿದರು. *"ಪ್ರವಾದಿಯವರೇ..., ನನ್ನ ಮನೆಯ ನೆರೆಯ ಮನೆಯವನ ಅಂಗಳದಲ್ಲಿ ಒಂದು ಫಲಕೊಡುವ ಖರ್ಜೂರದ ಮರವಿದೆ. ಅದು ನನ್ನ ಮನೆಯ ಅಂಗಳದ ಗೋಡೆಗೆ ತಾಗಿಯೇ ಇರುವುದರಿಂದ ರಾತ್ರಿಯ ಗಾಳಿಗೆ ಅದರಿಂದ ಬೀಳುವ ಖರ್ಜೂರದಿಂದ ಕೆಲವು ಖರ್ಜೂರಗಳು ನನ್ನ ಅಂಗಳಕ್ಕೆ ಬೀಳುತ್ತವೆ. ಬೆಳಗ್ಗೆ ಆ ಮನೆಯವರು ಎದ್ದೇಳುವುದಕ್ಕಿಂತ ಮುಂಚೆಯೇ ನನ್ನ ಪುಟ್ಟ ಮಕ್ಕಳು ಎದ್ದು ನಮ್ಮ ಅಂಗಳಕ್ಕೆ ಬಿದ್ದ ಖರ್ಜೂರ ವನ್ನು ತೆಗೆದು ತಿನ್ನುತ್ತಾರೆ. ಇದು ನನಗೆ ದೊಡ್ಡ ತಲೆ ನೋವಾಗಿದೆ. ಏನು ಮಾಡುವುದೆಂದು ತಿಳಿಯುವುದಿಲ್ಲ. ಹರಾಮಾದ ಆಹಾರ ನನ್ನ ಮಕ್ಕಳ ಹೊಟ್ಟೆಗೆ ಹೋಗಬಾರದೆಂಬ ನಿಯ್ಯತಿನಲ್ಲಿ ಅದನ್ನು ತೆಗೆದು ಅವನ ಅಂಗಳಕ್ಕೆ ಎಸೆಯಲು ದುಆಕ್ಕೆ ನಿಲ್ಲದೆ ಗಡಿಬಿಡಿಯಲ್ಲಿ ಹೋಗುತ್ತಿದ್ದೇನೆ."*
▪ಅಬೂದುಜಾನರಿಂದ ಇದನ್ನು ಕೇಳಿದಾಕ್ಷಣ ಬಹಳ ಬೇಸರಗೊಂಡ ಪ್ರವಾದಿಯವರು ಕೂಡಲೇ ಆ ಮನೆಯ ಯಜಮಾನನನ್ನು ಸಮೀಪಿಸಿ ಹೇಳಿದರು. *"ನಿನ್ನ ಮನೆಯಂಗಳದಲ್ಲಿರುವ ಖರ್ಜೂರ ಮರದಿಂದ ಅಬೂದುಜಾನರ ಮನೆಯಂಗಳಕ್ಕೆ ರಾತ್ರಿ ಗಾಳಿ ಬೀಸುವಾಗ ಖರ್ಜೂರಗಳು ಅತ್ತ ಬೀಳುತ್ತದೆ. ನಿನ್ನ ಒಡೆತನದಲ್ಲಿರುವ ಮರದಿಂದ ಅವರ ಅಂಗಳಕ್ಕೆ ಬೀಳುವ ಖರ್ಜೂರ ಬೆಳಿಗ್ಗೆ ಅವರ ಪುಟ್ಟ ಮಕ್ಕಳು ತಿನ್ನುವ ಕಾರಣದಿಂದ ಅವರು ದೊಡ್ಡ ಸಮಸ್ಯೆಗೆ ಸಿಲುಕಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಅವರೀಗ ಫಜ್‌ರ್ ನಮಾಝ್‌ನ ದುಆಕ್ಕೆ ಕೂಡ ನಿಲ್ಲದೆ ಓಡಿ ಬರುತ್ತಾರೆ. ಅದಕ್ಕಾಗಿ ನಾನು ನಿಮ್ಮಲ್ಲಿ ಒಂದು ಮಾತು ಹೇಳುತ್ತೇನೆ. ನೀವು ಈ ಮರವನ್ನು ಅವರಿಗೆ ದಾನ ಮಾಡಬೇಕು. ಇಂಶಾ ಅಲ್ಲಾಹ್ ನಾಳೆ ಪರಲೋಕದಲ್ಲಿ ಇದಕ್ಕೆ ಬದಲಾಗಿ ಹಸಿರು ವೈಡೂರ್ಯದ ಕಾಂಡ ಮತ್ತು ಬಿಳಿ ಮುತ್ತಿನ ರೆಂಬೆ ಇರುವ ಖರ್ಜೂರ ಮರವನ್ನು ನಾನು ನಿಮಗೆ ತೆಗೆದು ಕೊಡುತ್ತೇನೆ."* ಆದರೆ ಆ ನತದೃಷ್ಠ ವ್ಯಕ್ತಿ ಹೇಳಿದ. *"ಕಣ್ಣಿಗೆ ಕಾಣುವ ಗೋಚರ ವಸ್ತುವನ್ನು ಕಣ್ಣಿಗೆ ಕಾಣದ ಅಗೋಚರ ವಸ್ತುವಿಗೆ ಬದಲಾಗಿ ನಾನು ವ್ಯಾಪಾರ ಮಾಡ ಬಯಸುವುದಿಲ್ಲ. ಸಾಲ ವ್ಯಾಪಾರಕ್ಕೆ ನಾನಿಲ್ಲ."*
▪ಪ್ರವಾದಿ ಮುಹಮ್ಮದ್ (ಸ) ರ ಮಾತಿಗೆ ಕೂಡ ಬೆಲೆ ಕೊಡದ ಈತನ ಈ ವರ್ತನೆಯಿಂದ ಬೇಸತ್ತ ಹಝ್ರತ್ ಅಬೂಬಕರ್ ಸಿದ್ದೀಖ್ (ರ) ಹೇಳಿದರು. *"ಪರವಾಗಿಲ್ಲ ಪ್ರವಾದಿಯವರೇ..., ನಾನು ನನ್ನ ತೋಟದಲ್ಲಿರುವ ಹತ್ತು ಖರ್ಜೂರ ಮರವನ್ನು ಇವನಿಗೆ ಕೊಟ್ಟು ಇದನ್ನು ಇವನಿಂದ ಖರೀದಿಸಿ ಅಬೂದುಜಾನರಿಗೆ ಕೊಡುತ್ತೇನೆ. ಅದರೊಂದಿಗೆ ಸಮಸ್ಯೆಗೆ ಪರಿಹಾರವಾಯಿತಲ್ವಾ..?"*
▪ಇತ್ತ ಕುಫ್ರಿಯತನ್ನು ಮನದಲ್ಲಿ ಮುಚ್ಚಿಟ್ಟು ಪ್ರವಾದಿಯವರ ಎದುರಲ್ಲಿ ಮುಸ್ಲಿಮನಾಗಿ ನಟನೆ ಮಾಡುತ್ತಿದ್ದ ಈ ಖದೀಮ ಮುನಾಫಿಕ್‌ನಿಗೆ ಇದು ಕೇಳಿದಾಗ ಎಲ್ಲಿಲ್ಲದ ಸಂತೋಷವಾಯಿತು. ರಾತ್ರಿ ತನ್ನ ಪತ್ನಿಯಲ್ಲಿ ಹೇಳಿದನಂತೆ. *"ಇವತ್ತು ಒಂದು ಒಳ್ಳೆಯ ವ್ಯಾಪಾರವಾಯಿತು. ನೆರೆ ಮನೆಯ ಅಬೂದುಜಾನರಿಗೆ ನಮ್ಮ ಈ ಖರ್ಜೂರ ಮರವನ್ನು ನಮ್ಮ ಅಬೂಬಕರ್ ನನಗೆ ಹತ್ತು ಖರ್ಜೂರ ಮರ ಕೊಟ್ಟು ಖರೀದಿ ಮಾಡಿ ಕೊಟ್ಟಿದ್ದಾನೆ. ಏನೇ ಆಗಲಿ ಒಳ್ಳೆಯ ಲಾಭದ ವ್ಯಾಪಾರ. ಇನ್ನು ಏನು ಬೇಕಾದರು ಸಾಯಲಿ. ನಾನು ಮಾತ್ರ ನಮ್ಮ ಅಂಗಳದಲ್ಲಿರುವ ಮರದಲ್ಲಿ ಆಗುವ ಎಲ್ಲಾ ಖರ್ಜೂರ ಅವರಿಗೆ ಕೊಡ ಬಯಸುವುದಿಲ್ಲ. ಅವರ ಅಂಗಳಕ್ಕೆ ಬೀಳುವುದು ಮಾತ್ರ ಅವರಿಗೆ ಕೊಡುವ ಉಪಾಯದಲ್ಲಿದ್ದೇನೆ ."*
▪ಸುಬ್‌ಹಾನಲ್ಲಾಹ್! ಬೆಳಗಾಗುವಾಗ ಮುನಾಫಿಕನ ಮನೆಯಂಗಳದಲ್ಲಿದ್ದ ಖರ್ಜೂರ ಮರ ಅದಾಗಿಯೇ ಅಬೂ ದುಜಾನರ ಮನೆಯಂಗಳದಲ್ಲಿ ಹೋಗಿ ನಿಂತಿತ್ತು!!!
ಸಂಗ್ರಹ: ಇಮಾಮ್ ಅಬ್ದುಲ್ ರಹ್‌ಮಾನ್ ಸ್ವಫೂರಿಯವರ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.
Comments