ಮೂಲ ಲೇಖಕರು: ಆತೂರು ಇಬ್ರಾಹಿಂ ಸಖಾಫಿ
ಸಾಲ ಮುಕ್ತರಾಗಲೂ ಸ್ವಲಾತ್
ಇಂದು ಸಾಲ ತೀರಿಸಬೇಕಾದ ಕೊನೆಯ ದಿನ. ಬಗ್'ದಾದಿನ ನ್ಯಾಯಾಧೀಶರು ನೀಡಿದ ಅವಧಿಯು ಕೊನೆಗೊಳ್ಳುತ್ತಿದೆ. 3000 ದೀನಾರ್'ನೊಂದಿಗೆ ತಕ್ಷಣ ನ್ಯಾಯಾಲಯಕ್ಕೆ ತಲುಪಬೇಕು. ಆದರೆ ಕೈಯ್ಯಲ್ಲಿ ಈಗ ಮೂರು ದಿನಾರ್ ಕೂಡಾ ಇಲ್ಲ ಎಂದು ನೆನೆದಾಗ ಹೃದಯದ ಬಡಿತ ಜೋರಾಯಿತು. ಏನು ಮಾಡುವುದು...? ಆದರೂ ನಿರೀಕ್ಷೆಯ ಕನಸುಗಳು ಅವರನ್ನು ಸಮಾಧಾನ ಚಿತ್ತಗೊಳಿಸಿತು. ಕಳೆದ ರಾತ್ರಿ ಕಂಡ ಕನಸು ಸಾಕ್ಷಾತ್ಕಾರ ಗೊಳ್ಳದಿರಲಿಕ್ಕಿಲ್ಲ. ಅಲ್ಲಾಹುವಿನ ರಸೂಲ್ ತಾನೇ ನನ್ನ ಕನಸಿನಲ್ಲಿ ಬಂದ ರಾಜಕುಮಾರ. ಅವರಂತೆ ರೂಪಾಂತರ ಹೊಂದಲು ಶೈತಾನನಿಂದ ಸಾಧ್ಯವಿಲ್ಲ. ಕಳೆದ ಮೂರು ದಿವಸಗಳಲ್ಲಿ ಅವರು ನೀಡಿದ ನಿರ್ದೇಶನದಂತೆ ಮಂತ್ರಿಯಾದ ಅಲಿಯ್ಯುಬ್'ನು ಈಸಾರವರ ಮನೆಗೆ ಹೋಗುತ್ತಿದ್ದೇನೆ. ಮಂತ್ರಿಯವರ ಭವ್ಯ ಬಂಗಲೆಯ ಸಮೀಪಕ್ಕೆ ತಲುಪಿದಾಗ ಅವರು ಚಿಂತೆಯಿಂದ ಎಚ್ಚೆತ್ತು ಪರಿಸರವನ್ನು ಅವಲೋಕಿಸಿದರು.
ಅಲ್ಲಿ ಧಾರಾಳ ಜನರಿದ್ದಾರೆ. ತಮ್ಮ ಅಹವಾಲುಗಳನ್ನು ಸಲ್ಲಿಸಲಿಕ್ಕಾಗಿಯೂ ಮಂತ್ರಿಯಿಂದ ಪರಿಹಾರವನ್ನು ಪಡೆದುಕೊಳ್ಳಲಿಕ್ಕಾಗಿಯೂ ಬಂದವರು. ಆ ಜನರೊಂದಿಗೆ ಅವರು ಒಳಗೆ ಪ್ರವೇಶಿಸಿದರು. ಪ್ರತಿಯೊಬ್ಬರೂ ಮಂತ್ರಿಯನ್ನು ಸಮೀಪಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಸಿಗುವ ಪರಿಹಾರವನ್ನು ಪಡೆದು ಹಿಂತಿರುಗಿದರು. ಕೊನೆಗೆ ಅವರೊಬ್ಬರೇ ಬಾಕಿಯಾದರು.
ತಮ್ಮ ಅವಶ್ಯವೇನು? ಮಂತ್ರಿ ಕೇಳಿದರು. ಅವರು ಹಿಂಜರಿಯುತ್ತಾ ಹೇಳಿದರು. ನನ್ನ ಸಾಲವನ್ನು ತೀರಿಸಲಿಕ್ಕಾಗಿ 3000 ದೀನಾರ್ ಕೊಡಬೇಕೆಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತಮ್ಮೊಂದಿಗೆ ಹೇಳಿದ್ದಾರೆ.
ಮಂತ್ರಿ ಕೇಳಿದರು. ತಾವು ಹೇಳುವ ವಿಷಯವು ಸತ್ಯವೆಂಬುದಕ್ಕೆ ಯಾವ ಗ್ಯಾರಂಟಿಯಿದೆ?
ಆಗ ಅವರು ತನ್ನ ಜೀವನ ಚರಿತ್ರೆಯನ್ನು ವಿವರಿಸಲಾರಂಭಿಸಿದರು. ನಾನು ಬಗ್'ದಾದಿನ ವ್ಯಾಪಾರಿ ಪ್ರಮುಖರಲ್ಲಿ ಒಬ್ಬನಾಗಿದ್ದೆ. ಧಾರಾಳ ಸಂಪತ್ತು ನನ್ನಲ್ಲಿ ಕ್ರೋಢೀಕರಿಸಲ್ಪಟ್ಟಿತ್ತು. ಅಲ್ಲಾಹನ ನಿಅ್'ಮತ್ತ್(ಅನುಗ್ರಹಗಳು) ನನ್ನಲ್ಲಿ ರಾಶಿ ಬಿದ್ದವು. ಹೀಗೇ ಹಲವು ವರ್ಷಗಳು ಕಳೆದವು. ಅಲ್ಲಾಹನು ನನಗೆ ನೀಡಿದ ಅನುಗ್ರಹಗಳನ್ನು ಅವನೇ ಹಿಂದೆ ಪಡೆಯಲಾರಂಭಿಸಿದ. ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಕಾಲಕ್ರಮೇಣ ನಾನು ಬಡವನಾದೆ. ಸಾಲಬಾಧೆಯಿಂದ ನಾನು ತತ್ತರಿಸಿದೆ. ಜೀವನಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲದೇ ನಾನು ನಿರಾಶನಾದೆ.
ಈಗ ಸಾಲಗಾರರಲ್ಲಿ ಒಬ್ಬರು ನ್ಯಾಯಾಲಯದ ಮೆಟ್ಟಿಲೇರಿದರು. ಅವರಿಗೆ ಮೂರು ಸಾವಿರ ದೀನಾರ್ ನಾನು ಕೊಡಲಿಕ್ಕಿದೆ. ಖಾಳಿಯು ನನ್ನನ್ನು ಕರೆದು ವಿವರಗಳನ್ನು ತಿಳಿದುಕೊಂಡರು. ನಂತರ ಮೂವತ್ತು ದಿವಸಗಳ ಗಡುವನ್ನು ನೀಡಿ ಆ ಅವಧಿಯೊಳಗೆ ಸಾಲ ತೀರಿಸಬೇಕೆಂದು ನಿರ್ದೇಶಿಸಿದರು.
ನ್ಯಾಯಾಲಯದಿಂದ ಹಿಂತಿರುಗಿದ ನಾನು ವ್ಯಾಕುಲ ಚಿತ್ತನಾದೆ. 30 ದಿವಸಗಳ ಒಳಗೆ 3000 ದೀನಾರ್ ನನಗೆ ಎಲ್ಲಿಂದ ಸಿಗುವುದು? ಏನು ಮಾಡಬೇಕೆಂದು ತಿಳಿಯದೇ ನಾನು ಚಿಂತಾಕುಲನಾಗಿರುವಾಗ ಆ ಆಲೋಚನೆಯು ನನ್ನ ಹೃದಯದಲ್ಲಿ ಮೊಳಕೆಯೊಡೆಯಿತು. ಅಲ್ಲಾಹನೊಂದಿಗೆ ಹಾಗೂ ಅವನ ರಸೂಲರೊಂದಿಗೆ ಅಭಯವನ್ನು ಬೇಡುವುದು. ಅದಲ್ಲದೇ ಬೇರೆ ಯಾವುದೇ ಮಾರ್ಗವಿಲ್ಲ. ನಾನು ಮಸೀದಿಗೆ ಪ್ರವೇಶಿಸಿ ಮಿಹ್'ರಾಬಿನ ಹತ್ತಿರ ಕುಳಿತು ಅಲ್ಲಾಹನ ರಸೂಲರ ಮೇಲೆ ಸ್ವಲಾತ್ ಹೇಳಲಾರಂಭಿಸಿದೆ. ಸ್ವಲಾತ್ ಹೇಳಿ ಪ್ರಾರ್ಥಿಸಿದರೆ ಅಲ್ಲಾಹು ಸ್ವೀಕರಿಸುವನೆಂಬ ದೃಢ ವಿಶ್ವಾಸ ನನಗಿತ್ತು. ನಾನು ಸ್ವಲಾತ್ ಹೇಳುವುದರಲ್ಲೇ ತಲ್ಲಿನಣನಾದೆ.
ಅತ್ಯಗತ್ಯವಾದ ಕಾರ್ಯಗಳಿಗಲ್ಲದೇ ನಾನು ಮಸೀದಿಯಿಂದ ಹೊರಬರುತ್ತಿರಲಿಲ್ಲ. ಹೀಗೆ 27 ದಿವಸ ಕಳೆದರೂ ನಾನು ನಿರಾಶನಾಗಲಿಲ್ಲ. ನನ್ನ ನಿರೀಕ್ಷೆಯಂತೆ ಅಂದು ರಾತ್ರಿ ನಾನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕನಸಿನಲ್ಲಿ ಕಂಡೆ. ಅವರು ಹೇಳಿದರು. ಹೋಗಿ, ಅಲಿಯ್ಯುಬ್'ನು ಈಸಾರವರೊಂದಿಗೆ 'ನನ್ನ ಸಾಲವನ್ನು ತೀರಿಸಲು ತಮ್ಮೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಿರ್ದೇಶಿಸಿದ್ದಾರೆ' ಎಂದು ಹೇಳಿರಿ. ಇದನ್ನು ಕೇಳಿ ನಾನು ನಿದ್ರೆಯಿಂದ ಎಚ್ಚೆತ್ತೆ. ಹೃದಯಾಂತರಾಳದಲ್ಲಿ ಸಂತೋಷದ ಅಲೆಯು ಏಳತೊಡಗಿತು. ಆದರೂ ಒಂದು ನಿಮಿಷ ಆಲೋಚಿಸಿದೆ. ಈ ವಿವರವನ್ನು ಹೇಳಿದರೆ ಮಂತ್ರಿ ನಂಬುತ್ತಾರೆಯೇ...? ಇದು ಸತ್ಯವೆಂಬುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ ತಾನೇ? ಈ ಆಲೋಚನೆಯು ಮಂತ್ರಿಯ ಸಮೀಪಕ್ಕೆ ಬರುವುದರಿಂದ ನನ್ನನ್ನು ತಡೆಹಿಡಿಯಿತು.
ಮುಂದೆಯೂ ನಾನು ಮಸೀದಿಯಲ್ಲೇ ಕಳೆದೆ. ಎರಡನೇ ರಾತ್ರಿಯೂ ನಾನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕನಸಿನಲ್ಲಿ ಕಂಡೆ. ಕಳೆದ ರಾತ್ರಿ ಹೇಳಿದಂತೆ ಹೇಳಿದರೂ ಯಾವುದೋ ಹಿಂಜರಿಕೆಯಿಂದ ನಾನು ಮಂತ್ರಿಯವರನ್ನು ಸಂದರ್ಶಿಸಲಿಲ್ಲ. ಮತ್ತೆ ಮೂರನೇ ದಿವಸವೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸ್ವಪ್ನ ದರ್ಶನವುಂಟಾಯಿತು. ಅವರು ಕೇಳಿದರು. ನೀನು ಮಂತ್ರಿಯನ್ನು ಸಮೀಪಿಸಲಿಲ್ಲವೇ? ನಾನು ಹೇಳಿದೆ;
"ಇಲ್ಲ"
"ಯಾವ ಕಾರಣದಿಂದ ಸಮೀಪಿಸಲಿಲ್ಲ"
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಕೇಳಿದರು. ನಾನು ವಿನಯಾನ್ವಿತನಾಗಿ ಹೇಳಿದೆ. ನಾನು ಹೇಳುವ ಕಾರ್ಯವು ಸತ್ಯವೆಂಬುದಕ್ಕೆ ಸಾಕ್ಷಿ ಕೇಳಿದರೆ ನಾನೇನು ಹೇಳುವುದು.....?
ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. ಪ್ರತಿಯೊಂದು ದಿವಸವೂ ಮಂತ್ರಿಯವರು ನನ್ನ ಮೇಲೆ 5000 ಸ್ವಲಾತ್ ಹೇಳುತ್ತಿದ್ದಾರೆ. ಈ ವಿಷಯವು ಅಲ್ಲಾಹನ ರಸೂಲ್ ಹಾಗೂ ಅವನ ಮಲಕುಗಳಿಗಲ್ಲದೆ ಇತರ ಯಾರಿಗೂ ಗೊತ್ತಿಲ್ಲ. ಈ ರಹಸ್ಯವನ್ನು ನೀನು ಹೇಳಿದರೆ ಖಂಡಿತವಾಗಿಯೂ ಅವರು ನಿನ್ನ ಮಾತನ್ನು ನಂಬುತ್ತಾರೆ.
ಆ ನಿರ್ದೇಶನದಂತೆ ಆಗಿದೆ ನಾನಿಲ್ಲಿಗೆ ಬಂದದ್ದು. ಈ ವಿವರಣೆಯನ್ನು ಕೇಳಿ ಮಂತ್ರಿ ಆಶ್ಚರ್ಯಚಕಿತರಾದರು. ಯಾರಿಗೂ ಗೊತ್ತಾಗದೇ ಪ್ರಭಾತದ ಸಮಯದಲ್ಲಿ ಪ್ರತಿ ದಿನ ಹೇಳುವ ಸ್ವಲಾತಿನ ಕುರಿತು ಇವರಿಗೆ ವಿವರ ನೀಡಿದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಲ್ಲದೇ ಬೇರೆ ಯಾರೂ ಆಗಿರಲಿಕ್ಕಿಲ್ಲವೆಂದು ದೃಢವಾಯಿತು. ಸಂತೋಷಾತಿರೇಖದಿಂದ ಮಂತ್ರಿ ಎದ್ದು ಬಂದು ಅವರನ್ನು ಆಲಿಂಗನ ಮಾಡಿದರು. ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನಿರ್ದೇಶನದಂತೆ ಬಂದ ಪ್ರವಾದಿ ದೂತನಿಗೆ ಹಾರ್ದಿಕ ಸ್ವಾಗತ ಕೋರಿದರು. ನಂತರ ಅವರ ಸಾಲ ತೀರಿಸಲು 3000 ದೀನಾರ್ ನೀಡಿದರು. ಮತ್ತೊಂದು 3000 ಮನೆಯ ಅಗತ್ಯಕ್ಕಾಗಿಯೂ ಬೇರೊಂದು 3000 ವ್ಯಾಪಾರದ ಅಗತ್ಯಕ್ಕೂ ನೀಡಿದರು. ಒಟ್ಟು 9000 ದೀನಾರ್'ಗಳನ್ನು ನೀಡುತ್ತಾ ಮಂತ್ರಿ ಹೇಳಿದರು. ಇನ್ನು ಮುಂದೆ ಯಾವುದೇ ಅಗತ್ಯ ಉಂಟಾದರೂ ತಾವು ಇಲ್ಲಿಗೆ ಬರಬೇಕು. ತಮ್ಮ ಯಾವುದೇ ಸಂಕಷ್ಟವನ್ನು ನಾನು ಪರಿಹರಿಸಿ ಕೊಡುತ್ತೇನೆ.
ಅತಿಯಾದ ಆಹ್ಲಾದದೊಂದಿಗೆ ಅಲ್ಲಾಹನನ್ನು ಸ್ತುತಿಸಿ ಸ್ವಲಾತ್ ಹೇಳುತ್ತಾ ಅವರು ಮನೆಗೆ ಮರಳಿದರು. 6000 ದೀನಾರನ್ನು ಪತ್ನಿಯ ಕೈಗೆ ನೀಡಿದರು. 3000 ದೀನಾರಿನೊಂದಿಗೆ ನ್ಯಾಯಾಲಯದತ್ತ ಧಾವಿಸಿದರು. ಆಗಲೇ ಅವರ ಪ್ರತಿವಾದಿಯು ನ್ಯಾಯಾಲಯಕ್ಕೆ ತಲುಪಿದ್ದರು. ಆಗ ಪ್ರತಿವಾದಿಯ ಆಲೋಚನೆಗಳೆಲ್ಲಾ ತಲೆಕೆಳಗಾಯಿತು. ಸಾಲದ ಮೊತ್ತದ ದೀನಾರಿನೊಂದಿಗೆ ಇವರು ಹಾಜರಾಗಲಾರರೆಂದಾಗಿತ್ತು ಅವರ ಧಾರಣೆ.
ಹಣದ ಗಂಟನ್ನು ನ್ಯಾಯಾಧೀಶರ ಮುಂದಿಡುತ್ತಾ ವಿನಯಾನ್ವಿತರಾಗಿ ಅವರು ಹೇಳಿದರು. ಇಂದು ಬೆಳಿಗ್ಗೆ ಒಂದು ದೀನಾರ್ ಕೂಡಾ ನನ್ನ ಕೈಯಲ್ಲಿರಲಿಲ್ಲ. ಆದರೂ ಅಲ್ಲಾಹನ ವಿವರಣಾತೀತ ಅನುಗ್ರಹದಿಂದ ಹಾಗೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್ ಹೇಳಿದ ಪುಣ್ಯದಿಂದ ಈ ಹಣದೊಂದಿಗೆ ಇಲ್ಲಿಗೆ ಹಾಜರಾಗಲು ಸಾಧ್ಯವಾಯಿತು. ನಂತರ ಅವರು ನಡೆದ ಘಟನೆಗಳನ್ನು ವಿವರಿಸಿದರು.
ಬಗ್'ದಾದಿನ ಖಾಳಿಯೂ ಸಾಲ ನೀಡಿದವರೂ ಇದನ್ನು ಒಂದು ಆಶ್ಚರ್ಯಕರ ಘಟನೆಯಂತೆ ಆಲಿಸಿದರು.... ಎಲ್ಲಾ ವಿಷಯಗಳು ಹೇಳಿ ಮುಗಿದಾಗ ಖಾಳಿಯವರ ಹೃದಯಾಂತರಾಳದಲ್ಲಿ ಆವೇಶವೂ ಸಂತೋಷವೂ ತುಂಬಿ ತುಳುಕಿತು. ಖಾಳಿ ಹೇಳಿದರು. ಮಂತ್ರಿ ನೀಡಿದ ಹಣವನ್ನು ನೀವೇ ಇರಿಸಿಕೊಳ್ಳಿ. ನಿಮ್ಮ ಸಾಲವನ್ನು ನಾನೇ ತೀರಿಸುತ್ತೇನೆ ಎಂದು ಹೇಳುತ್ತಾ 3000 ದೀನಾರ್ ತೆಗೆದು ಸಾಲ ನೀಡಿದವರತ್ತ ಚಾಚಿ ಸ್ವೀಕರಿಸಲು ಹೇಳಿದರು. ಇದನ್ನು ನೋಡಿದಾಗ ಸಾಲ ನೀಡಿದ ವ್ಯಕ್ತಿ ಹೇಳಿದರು. ಅಲ್ಲಾಹು ಹಾಗೂ ಅವನ ರಸೂಲರಿಗಾಗಿ ನಾನು ಆ 3000 ದೀನಾರನ್ನು ಅವರಿಗೆ ಮನ್ನಾ ಮಾಡಿದ್ದೇನೆ.
ಒಟ್ಟಿನಲ್ಲಿ ಅಲ್ಲಿನ ಸಂತೋಷವು ಪರಿಸರ ಪ್ರಜ್ಞೆ ಮರೆಸುವಂತಿತ್ತು. ಅವರು ಪರಸ್ಪರ ಸಲಾಮ್ ಹೇಳಿ ಅಲ್ಲಿಂದ ಬೇರ್ಪಟ್ಟರು. ಆಗ ಅವರು 12000 ದೀನಾರಿನ ಒಡೆಯರಾಗಿದ್ದರು. ಅವರು ಅಲ್ಲಾಹನನ್ನು ಸ್ತುತಿಸಿ ಸ್ವಲಾತ್ ಹೇಳುತ್ತಾ ತನ್ನ ಮನೆಯತ್ತ ಮರಳಿದರು.
*ಮುಂದಿನ ಚರಿತ್ರೆ : ಪವಿತ್ರ ರೌಳಾದ ಮುಂದೆ ಉಮರ್ ಖಾಳ್ವೀ...*
*ಮುಂದುವರೆಯುತ್ತದೆ...........*
*ಸ್ವಲಾತ್ ಹಾಗೂ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲಿನ ಪ್ರೀತಿ ನಿಮ್ಮ ಇಹ ಹಾಗೂ ಪರದ ಸಕಲ ಸಮಸ್ಯೆಗಳಿಗೂ ಪರಿಹಾರವಾಗಿದೆ.*
*ಓ ಪ್ರೇಮ ಭಾಜನರೇ(ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ತಮಗಿದೋ ಸಾವಿರ, ಸಾವಿರ ಸಲಾಂ ನಬಿಯರೇ*
ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
*ಸ್ವಲ್ಲಲ್ಲಾಹು ಅಲಾ ಸಯ್ಯುದುನಾ ಮುಹಮ್ಮದ್*
Comments