ಝಕಾತ್ : ಸಂಘಟನೆಗಳಿಗೆ ನೀಡುವ ಭಿಕ್ಷೆಯಾಗದಿರಲಿ
ಸಮಾಜದ ಆರ್ಥಿಕ ಅಸಮಾನತೆಯನ್ನು ಸರಿದೂಗಿಸಲು ಪವಿತ್ರ ಇಸ್ಲಾಂ ಧರ್ಮದ ದೂರದೃಷ್ಟಿಯ ಫಲವಾಗಿ ಅದರ ಪಂಚ ಕಡ್ಡಾಯ ಕರ್ಮಗಳಲ್ಲಿ ಅಳವಡಿಸಿದ ಒಂದು ಮಹತ್ತರ ಕರ್ಮವಾಗಿದೆ ಝಕಾತ್.
ಅಂದರೆ ಧನಿಕನೊಬ್ಬ ಸರ್ವಶಕ್ತನು ತನಗೆ ನೀಡಿದ ಸಂಪತ್ತಿನ ಒಂದು ನಿರ್ದಿಷ್ಟ ಭಾಗವನ್ನು ಸಮಾಜದಲ್ಲಿರುವ ಅರ್ಹ ವಿಭಾಗಗಳಿಗೆ ಕಡ್ಡಾಯವಾಗಿ ದಾನ ನೀಡುವುದು.
*ಇಂದು ಝಕಾತ್‍ನ ಮೊತ್ತವನ್ನು ಕೆಲವೊಂದು ಸಂಘ ಸಂಸ್ಥೆಗಳು ಸಂಗ್ರಹಿಸಿ ಸಮಾಜದಲ್ಲಿ ವಿತರಿಸುತ್ತಿರುವುದು ಕಂಡು ಬರುತ್ತಿದೆ.*
*ಇದರಿಂದ ಧನಿಕನ ಝಕಾತ್ (ಕಡ್ಡಾಯ ದಾನ) ಸಂದಾಯವಾಗಲಾರದು.*
*ಇಸ್ಲಾಮೀ ಕ್ರಮದ ಪ್ರಕಾರ ಮಾತ್ರ ಝಕಾತ್ ನೀಡಿದರೆ ಝಕಾತ್ ಸಂದಾಯವಾಗುತ್ತದೆಯೇ ಹೊರತು ಸಂಘ ಸಂಸ್ಥೆಗಳಿಗೆ ನೀಡಿ ಹೆಸರು ಗಳಿಸಿದ ಮಾತ್ರಕ್ಕೆ ಇದು ಸಂದಾಯವಾಗದು ಎಂಬುದನ್ನು ಸಂಘ ಸಂಸ್ಥೆಗಳಿಗೆ ಝಕಾತ್‍ನ ಪಾಲನ್ನು ನೀಡಿ ಕೈತೊಳೆದುಕೊಳ್ಳುವ ಧನಿಕರು ತಿಳಿದುಕೊಳ್ಳಬೇಕಾದ ಅಗತ್ಯವಿದೆ.*
Face Book Like Page✌🏻
https://www.facebook.com/ಅಹ್ಲು-ಸುನ್ನತಿ-ವಲ್-ಜಮಾಅ-1032565733616311/?referrer=whatsapp
ಈ ರೀತಿ ನೀಡುವ ದಾನ ಸ್ವದಖ (ಐಚ್ಛಿಕ ದಾನ) ವಾಗಿ ಪರಿಗಣಿಸಲ್ಪಡುತ್ತದೆಯೇ ಹೊರತು ಅದರಿಂದ ಝಕಾತ್ ಸಂದಾಯವಾಗಲು ಸಾಧ್ಯವಿಲ್ಲ.
ಐಚ್ಛಿಕ ದಾನ (ಸ್ವದಖ) ಎಷ್ಟೇ ನೀಡಿದರೂ ಅದರಿಂದ ಝಕಾತ್ (ಕಡ್ಡಾಯ ದಾನ) ಸಂದಾಯವಾಗುವುದಿಲ್ಲ.
ಕೆಲವು ಧನಿಕರು ತಮ್ಮ ಅಜ್ಞಾನದಿಂದಲೋ ಏನೋ ತಮ್ಮ ಸಂಪತ್ತಿನಿಂದ ಅಪರಿಮಿತ ಸ್ವದಖ (ಐಚ್ಛಿಕ ದಾನ) ನೀಡುತ್ತಾರೆ.
ಆದರೆ ಅವರ ಸಂಪತ್ತಿನಿಂದ ಕಡ್ಡಾಯವಾಗಿ ನೀಡಬೇಕಾದ ನಿರ್ದಿಷ್ಟ ಅಂಶವನ್ನು ಅರ್ಹರಿಗೆ ತಲುಪಿಸುವಲ್ಲಿ ಅವರು ವಿಫಲರಾಗುತ್ತಾರೆ.
ಇದರಿಂದ ಆತ ಇಸ್ಲಾಮೀ ಪಂಚ ಕರ್ಮಗಳಲ್ಲೊಂದಾದ ಝಕಾತ್ (ಕಡ್ಡಾಯ ದಾನ)ನ್ನು ನೀಡದೆ ವಂಚಿಸಿದ ಪಾಪಕ್ಕೆ ಅರ್ಹನಾಗುತ್ತಾನೆ.
ಧನಿಕನೊಬ್ಬ ತನ್ನ ಸಂಪತ್ತಿನ ನಿರ್ದಿಷ್ಟ ಭಾಗವನ್ನು ಝಕಾತ್ ನೀಡುವುದು ಆತನ ಔದಾರ್ಯವಾಗಿರದೆ, ಅದನ್ನು ಪಡೆಯುವ ಅರ್ಹತೆ ಇರುವ ವರ್ಗದ ಹಕ್ಕು ಆಗಿರುತ್ತದೆ. ಇದರಿಂದಾಗಿ ಝಕಾತ್ ನೀಡುವ ಧನಿಕ ದಾಷ್ಟ್ರ್ಯತೆ ಮೆರೆಯಬೇಕಾದ ಅವಶ್ಯಕತೆ ಇಲ್ಲ. ಸಮಾಜದಲ್ಲಿರುವ ಅರ್ಹ ಫಲಾನುಭವಿಗಳಿಗೆ ಅಲ್ಲಾಹನು ತಾನು ನೀಡಿದ ಸಂಪತ್ತನಿಂದ ಧನಿಕನ ಮೂಲಕ ಸಂದಾಯ ಮಾಡುತ್ತಾನೆ ಎಂಬ ಕನಿಷ್ಠ ಪ್ರಜ್ಞೆ ಈ ಸಂದರ್ಭದಲ್ಲಿ ಧನಿಕನಾದವನಿಗೆ ಇರಬೇಕಾದದ್ದೆ.
*ಅಲ್ಲಾಹನು ನೀಡಿದ ಹೇರಳ ಸಂಪತ್ತನ್ನು ಕೂಡಿಟ್ಟುಕೊಂಡು ಝಕಾತ್ ನೀಡದ ದರಿದ್ರರ ಬಗ್ಗೆ ಪವಿತ್ರ ಕುರ್‍ಆನ್ ಕಠಿಣ ಶಬ್ದಗಳಲ್ಲಿ ಎಚ್ಚರಿಸುತ್ತದೆ :*
*"ಚಿನ್ನ ಹಾಗೂ ಬೆಳ್ಳಿಯನ್ನು ಸಂಗ್ರಹಿಸಿ ಸರ್ವಶಕ್ತನ ಮಾರ್ಗದಲ್ಲಿ ವ್ಯಯಿಸದವರಿಗೆ ಕಠಿಣ ಶಿಕ್ಷೆಯ ಸಂದೇಶವನ್ನು ನೀಡಿರಿ, ಈ ಚಿನ್ನ-ಬೆಳ್ಳಿ (ಸಂಪತ್ತು) ಗಳ ಮೇಲೆ ಧಗಧಗಿಸುವ ನರಕಾಗ್ನಿಯನ್ನು ಉರಿಸಲಾಗುವುದು, ಬಳಿಕ ಅದರಿಂದ ಅವರ ಹಣೆಗಳಿಗೂ, ಪಾಶ್ರ್ವಗಳಿಗೂ, ಬೆನ್ನುಗಳಿಗೂ ಬರೆ ಹಾಕಲಾಗುವುದು, ಇದು ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತು.* *ಈಗ ಇದರ ಸವಿಯನ್ನು ಸವಿಯಿರಿ" ಎಂಬ ಸ್ಪಷ್ಟವಾದ ಎಚ್ಚರಿಕೆಯನ್ನು ಕುರ್‍ಆನ್‍ನ ತೌಬಾ ಅಧ್ಯಾಯದಲ್ಲಿ ಝಕಾತ್ ನೀಡದ ದರಿದ್ರರಿಗೆ ಅಲ್ಲಾಹನು ನೀಡುತ್ತಿದ್ದಾನೆ.*
ಝಕಾತ್ ನೀಡಲು ಇರುವ ಎರಡು ನಿಬಂಧನೆಗಳೆಂದರೆ
1.ಝಕಾತ್ ನೀಡುವಾಗ ಸಂಕಲ್ಪಿಸುವುದು (ನಿಯ್ಯತ್) ಮತ್ತು
2. ಅದನ್ನು ಅರ್ಹ ವಿಭಾಗಕ್ಕೆ ನೀಡುವುದು ಮಾತ್ರವಾಗಿದೆ.
*ಅರ್ಹ ವಿಭಾಗಗಳೆಂದರೆ ಇಸ್ಲಾಮೀ ನಿಯಮ ಪ್ರಕಾರ 8 ವಿಭಾಗಗಳನ್ನು ಗುರುತಿಸಲಾಗುತ್ತದೆ.*
ಅವುಗಳೆಂದರೆ
*1) ಫಕೀರ* (ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದು, ಖರ್ಚನ್ನು ಹೊಂದಿಸಲು ಅಸಾಧ್ಯವಾಗಿರುವವರು),
*2) ಮಿಸ್ಕೀನ್* (ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದರೂ ಖರ್ಚನ್ನು ಹೊಂದಿಸಿಕೊಳ್ಳಲು ಸಾಧ್ಯವಿರುವವರು),
*3) ನವ ಮುಸ್ಲಿಂ* (ನೂತನವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದವನು),
*4) ಸಾಲಗಾರರು* (ಇದರಲ್ಲಿ ಧರ್ಮ ಸಮ್ಮತವಾದ ಅನಿವಾರ್ಯ ಕಾರಣಗಳಿಗಾಗಿ ಸಾಲ ಮಾಡಿದವರು ಮಾತ್ರ ಒಳಪಡುತ್ತಾರೆ.
ಲೌಕಿಕ ಆಡಂಬರಗಳಿಗೆ, ವ್ಯಾಪಾರ-ವಹಿವಾಟು ವೃದ್ದಿಸಲು, ಕಟ್ಟಡ-ಬಂಗಲೆ ನಿರ್ಮಿಸಲು, ವಾಹನ ಖರೀದಿಗಾಗಿ ಸಾಲ ಮಾಡುವ ವರ್ಗ ಇವರಲ್ಲಿ ಒಳಪಡುವುದಿಲ್ಲ ಎಂಬುದು ಗಮನಾರ್ಹ),
*5) ಕಡ್ಡಾಯ ಹಾಗೂ ಧರ್ಮ ಸಮ್ಮತ ಯಾತ್ರೆ ಕೈಗೊಳ್ಳುವ ಯಾತ್ರಿಕರು,*
*6) ಇನ್ನೊಬ್ಬರ ಅಧೀನದಲ್ಲಿ ಬದುಕುವ ಗುಲಾಮರು.*
*7) ಇಸ್ಲಾಮೀ ಉದ್ದೇಶಕ್ಕೆ ಹೋರಾಡುವ ಯೋಧರು.*
*8) ಝಕಾತ್ ಖಾತೆಯ* (ಇಸ್ಲಾಮೀ ಆಡಳಿತ ಇರುವ ರಾಷ್ಟ್ರಗಳಲ್ಲಿ) *ನೌಕರರು.*
ಈ ಎಂಟು ವರ್ಗಗಳ ಪೈಕಿ ಗುಲಾಮ ವ್ಯವಸ್ಥೆ ಚಾಲ್ತಿಯಲ್ಲಿಲ್ಲದ ಕಾರಣ ಗುಲಾಮರು,
ಭಾರತದಂತಹ ಜಾತ್ಯಾತೀತ ರಾಷ್ಟ್ರಗಳಲ್ಲಿ ಜಿಹಾದ್ (ಧರ್ಮ ಯುದ್ದ) ನಿಷಿದ್ದವಾದ ಕಾರಣ ಇಸ್ಲಾಮೀ ಯೋಧರು ಹಾಗೂ ಭಾರತದಲ್ಲಿ ಝಕಾತ್ ಖಾತೆ ಇಲ್ಲದ ಕಾರಣ ಝಕಾತ್ ಖಾತೆಯ ನೌಕರರು ಎಂಬ ಮೂರು ವರ್ಗದ ಸ್ಥಾನ ಭಾರತದ ಮಟ್ಟಿಗೆ ತೆರವಾಗಿದೆ ಎನ್ನಬಹುದು.
*ಇನ್ನು ಝಕಾತನ್ನು ಮೂರು ವಿಧದಲ್ಲಿ ಹಂಚಬಹುದಾಗಿದೆ.*
1) ಇಸ್ಲಾಮೀ ಆಡಳಿತವಿರುವ ರಾಷ್ಟ್ರಗಳಲ್ಲಿ ಆಳುವವನು ಅಥವಾ ಅವನು ಅಧಿಕಾರ ಕೊಟ್ಟವರ ಕೈಗೆ ಒಪ್ಪಿಸಬಹುದು.
2) ಧನಿಕನೇ ಸ್ವತಃ ಕೊಡುವುದು,
3) ಧನಿಕನು ತನ್ನ ಜವಾಬ್ದಾರಿಯನ್ನು ಮತ್ತೊಬ್ಬ ಅರ್ಹ ಪ್ರತಿನಿಧಿಗೆ ಒಪ್ಪಿಸಬಹುದು.
ಭಾರತದಂತಹ ಇಸ್ಲಾಮಿಕ್ ಆಡಳಿತವಿಲ್ಲದ ರಾಷ್ಟ್ರಗಳಲ್ಲಿ ಸ್ವತಃ ಧನಿಕನೇ ಝಕಾತ್ ನೀಡುವುದನ್ನು ನಿರ್ವಹಿಸಬೇಕು ಅಥವಾ ಇನ್ನೊಬ್ಬ ಅರ್ಹ ಪ್ರತಿನಿಧಿಗೆ ಒಪ್ಪಿಸಬೇಕು ಹೊರತು ಯಾವುದೇ ಸಂಘ ಸಂಸ್ಥೆಗಳ ಜವಾಬ್ದಾರಿಗೆ ಒಪ್ಪಿಸುವುದು ನಿಯಮಬಾಹಿರವಾಗುತ್ತದೆ.
ತೀರಾ ಇತ್ತೀಚೆಗೆ ಕೆಲವೊಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬಹಿರಂಗ ಭಿಕ್ಷಾಟನೆಗೆ ಇಳಿದು ನಿಮ್ಮ ಝಕಾತ್‍ನ ಪಾಲನ್ನು ನಮ್ಮ ಸಂಘಟನೆಗೆ ನೀಡಿ ನಾವು ಅವುಗಳನ್ನು ಅರ್ಹರಿಗೆ ನೀಡುತ್ತೇವೆ ಎಂಬುದಾಗಿ ತಮ್ಮ ಪ್ರತಿಷ್ಠೆ, ಪ್ರಚಾರಕ್ಕಾಗಿ ಧನಿಕರ ಬಳಿ ದುಂಬಾಲು ಬೀಳುವ ಸನ್ನಿವೇಶ ಕಂಡು ಬರುತ್ತಿದೆ.
ಇಂತಹ ಮಂದಿಯ ಕೈಯಲ್ಲಿ ಝಕಾತ್ ಅಂಶವನ್ನು ಕೊಟ್ಟು ಕೈತೊಳೆದುಕೊಳ್ಳುವ ಧನಿಕರು ಗಮನಿಸಬೇಕಾದ ಅಂಶವೆಂದರೆ ಇಂತಹ ಸಂಘ ಸಂಸ್ಥೆಗಳ ಮೂಲಕ ಝಕಾತ್ ಪಾವತಿಸಿದರೆ ಝಕಾತ್ ಸಂದಾಯವಾಗುವುದಿಲ್ಲ ಎಂಬುದನ್ನು.
ಕಾರಣ ಇಸ್ಲಾಂ ಸೂಚಿಸಿದ ಮೂರು ವಿಧಾನಗಳಲ್ಲಿ ಯಾವ ವಿಧಾನವೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಪ್ರತಿನಿಧಿಸುವುದಿಲ್ಲ.
ಇಸ್ಲಾಂ ಸೂಚಿಸಿದ ಧನಿಕನು ನೇಮಿಸುವ ಪ್ರತಿನಿಧಿಯು ಅರ್ಹವಾದ ಓರ್ವ ವ್ಯಕ್ತಿಯಾಗಬೇಕೇ ಹೊರತು ಸಂಘ-ಸಂಸ್ಥೆಗಳ ಸಮಿತಿ ಪದಾಧಿಕಾರಿಗಳಿಗೆ ಅನ್ವಯಿಸುವುದಿಲ್ಲ.
*ಈ ನಿಟ್ಟಿನಲ್ಲಿ ಝಕಾತ್ ಕಡ್ಡಾಯವಾಗಿರುವ ಧನಿಕರು ಸಮಾಜದಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಇಂತಹ ಸಂಘ-ಸಂಸ್ಥೆಗಳ ಕಾಪಟ್ಯತೆಗೆ ಬಲಿ ಬೀಳದೆ ಸ್ವತಃ ಮುಂದೆ ಬಂದು ಸಮಾಜದಲ್ಲಿ ಚಾಲ್ತಿಯಲ್ಲಿರುವ ಅರ್ಹ ವಿಭಾಗಗಳನ್ನು ಗುರುತಿಸಿ, ಧರ್ಮ ಗುರುಗಳಿಂದ ಸೂಕ್ತ ಮಾರ್ಗದರ್ಶನ ಪಡೆದೇ ತಮ್ಮ ಕಡ್ಡಾಯ ಕರ್ಮವನ್ನು ನೆರವೇರಿಸುವತ್ತ ಗಮನ ಹರಿಸುವುದು ಒಳಿತು...*
Comments