ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ.
ಕೊನೆಯ ಭಾಗ
✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
ಮಕ್ಕಾ ವಿಜಯದೊಂದಿಗೆ ಅರಬ್ ನಾಡಿನಲ್ಲಿ ಶಿರ್ಕಿನ ಕೋಟೆ ಉರುಳಿತು. ಜನರು ಇಸ್ಲಾಮಿನೆಡೆಗೆ ಗುಂಪು ಗುಂಪಾಗಿ ಧಾವಿಸಿ ಬರುತ್ತಿದ್ದರು. ಆದರೆ ಸಕೀಫ್, ಹವಾಝಿನ್ ಎಂಬ ಎರಡು ಗೋತ್ರಗಳು ನೆಬಿ ಸ. ಅ ರವರೊಂದಿಗೆ ಯುದ್ಧ ಮಾಡಲು 30,000 ಸಾವಿರದಷ್ಟು ಸೈನ್ಯಗಳನ್ನು ಸಜ್ಜುಗೊಳಿಸಿದರು.ಆಗ ನೆಬಿ ಸ.ಅ ರವರು 12,000 ಯೋಧರೊಂದಿಗೆ ಹಿಜ್ರಾ 8 ನೇ ವರ್ಷ ಶವ್ವಾಲ್ ತಿಂಗಳಲ್ಲಿ ಅವರನ್ನು ಹುನೈನಿನಲ್ಲಿ ಎದುರಿಸಿದರು.
ಈ ಯುದ್ಧದಲ್ಲಿ ಪ್ರಾರಂಭ ಹಂತದಲ್ಲಿ ಮುಸ್ಲಿಮರಿಗೆ ಪರಾಜಯ ಉಂಟಾದರೂ ಕೊನೆಯ ಹಂತದಲ್ಲಿ ಭರ್ಜರಿ ವಿಜಯ ದಾಖಲಾಯಿತು. ಈ ಯುದ್ಧಕ್ಕೆ ಗಝ್ವತ್ ಹುನೈನ್ ಎಂದು ಕರೆಯಲಾಗುತ್ತದೆ.
ಹಿಜ್ರಾ 9 ನೇ ವರ್ಷ ರೋಮರು ನೆಬಿ ಸ.ಅ ರವರೊಂದಿಗೆ ಯುದ್ಧ ಮಾಡಲು 40,000 ದಷ್ಟಿರುವ ಸೈನ್ಯವನ್ನು ಸಜ್ಜುಗೊಳಿಸಿದರು. ಆಗ ನೆಬಿ ಸ.ಅ ರವರು 30,000 ಅನುಯಾಯಿಗಳೊಂದಿಗೆ ಹೊರಟರು. ತಬೂಕ್ ಎಂಬಲ್ಲಿಗೆ ತಲುಪಿದರು. ಆದರೆ ಅಲ್ಲೆಲ್ಲಿಯೂ ಶತ್ರುಗಳನ್ನು ಕಾಣಲು ಸಾಧ್ಯವಾಗಲಿಲ್ಲ. ನೆಮ್ಮದಿಯೊಂದಿಗೆ ಮರಳಿದರು. ಇದಾಗಿದೆ ಗಝ್ವತ್ ತಬೂಕ್. ಇದು ಇಸ್ಲಾಮಿನ ಕೊನೆಯ ಯುದ್ಧ ಅಥವಾ ಗಝ್ವತ್ ಆಗಿದೆ.
ಹಿಜ್ರಾ 9 ನೇ ವರ್ಷ ನಾನಾ ಭಾಗಗಳಿಂದ ನೆಬಿ ಸ.ಅ ರವರ ಬಳಿ ಗುಂಪು ಗುಂಪಾಗಿ ಜನರು ಆಗಮಿಸುತ್ತಿದ್ದರು. ಆದುದರಿಂದ ಈ ವರ್ಷವನ್ನು ಆಮುಲ್ ವುಫೂದ್ ಎಂದು ಕರೆಯಲಾಗುತ್ತದೆ. ಈ ವರ್ಷದಲ್ಲಿ ಅಬೂಬಕರ್ ಸಿದ್ದೀಖ್ ರ.ಅ ರವರ ನೇತ್ರತ್ವದಲ್ಲಿ ಹಜ್ ನಿರ್ವಹಿಸಲಾಯಿತು. ಹಿಜ್ರಾ 10 ನೇ ವರ್ಷ ನೆಬಿ ಸ.ಅ ಹಜ್ಜತುಲ್ ವದಾಅ್ ನಿರ್ವಹಿಸಿದರು. ಒಂದು ಲಕ್ಷದ ಹದಿನಾಲ್ಕು ಸಾವಿರ ಸತ್ಯ ವಿಶ್ವಾಸಿಗಳು ನೆಬಿ ಸ.ಅ ರವರೊಂದಿಗಿದ್ದರು. ಅರಫಾ ದಿವಸ ನೆಬಿ ಸ.ಅ ರವರು ಖುತ್ಬತುಲ್ ವದಾಅ್ ಎಂಬ ಪ್ರಸಿದ್ಧವಾದ ಕೊನೆಯ ಪ್ರಭಾಷಣ ನಡೆಸಿದರು. ಇಸ್ಲಾಂ ಸಂಪೂರ್ಣವಾಯಿತು ಎಂದು ಪ್ರಖ್ಯಾಪಿಸುವ ಆಯತ್ ಆ ದಿನ ಅರಫಾದಲ್ಲಿ ಅವತೀರ್ಣವಾಯಿತು.
( الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا. )
ಇಂದು ನಿಮಗೆ ನಿಮ್ಮ ಧರ್ಮವನ್ನು ನಾನು ಸಂಪೂರ್ಣಗೊಳಿಸಿದೆ. ನನ್ನ ಅನುಗ್ರಹ ನಿಮಗೆ ನಾನು ಪೂರ್ತಿಗೊಳಿಸಿದೆ.
ಈ ಸಂತೋಷದಾಯಕ ಸಂದರ್ಭದಲ್ಲಿ ಅಲ್ಲಾಹು ತನ್ನ ಪ್ರವಾದಿಯನ್ನು ತನ್ನೆಡೆಗೆ ಆಹ್ವಾನಿಸಿದನು. ನೆಬಿ ಸ.ಅ ಅದಕ್ಕೆ ರೆಡಿಯಾದರು. ಬದುಕಿರುವವರೊಂದಿಗೆ ವಸಿಯ್ಯತ್ ಮಾಡಿ ಮರಣ ಹೊಂದಿದವರ ಝಿಯಾರತ್ ನಡೆಸಿ ಯಾತ್ರೆ ಕೇಳಿದರು. ಪವಿತ್ರ ಮದೀನದ ಜನ್ನತುಲ್ ಬಖೀಯಿನಲ್ಲಿ ಅಂತ್ಯ ವಿಶ್ರಮ ಹೊಂದಿದವರನ್ನೂ, ಉಹುದ್ ಶುಹದಾಗಳನ್ನೂ ಝಿಯಾರತ್ ನಡೆಸಿ ಅವರಿಗಾಗಿ ಪ್ರಾರ್ಥಿಸಿದರು.
ಹಿಜ್ರಾ ಹನ್ನೊಂದನೇ ವರ್ಷ ಸಫರ್ ತಿಂಗಳ ಕೊನೆಯಲ್ಲಿ ನೆಬಿ ಸ.ಅ ರವರಿಗೆ ರೋಗ ಬಾಧಿಸಿತು. ರೋಗವು ಹದಿಮೂರು ದಿವಸಗಳವರೆಗೆ ಬಾಧಿಸಿತು. ರೋಗವು ಕಠಿಣವಾದಾಗ ಉಳಿದ ಪತ್ನಿಯರ ಸಮ್ಮತದೊಂದಿಗೆ ಆಯಿಶ ರ.ಅ ರವರ ಮನೆಯಲ್ಲಿ ತಂಗಿದರು. ನಮಾಜಿಗೆ ಹೋಗಲು ಅಸಾಧ್ಯವಾದಾಗ ಅಬೂಬಕರ್ ಸಿದ್ದೀಕ್ ರ.ಅ ರವರನ್ನು ನಮಾಜಿಗೆ ಇಮಾಂ ಆಗಿ ನಿಲ್ಲಲು ನಿರ್ದೇಶಿಸಿದರು. ಸ್ವಹಾಬಿವರ್ಯರ ದುಃಖ ಬೇಜಾರು ಕಂಡಾಗ ನೆಬಿ ಸ.ಅ ರವರು ಎರಡು ಸ್ವಹಾಬಿಗಳ ಭುಜದ ಮೇಲೆ ಕೈ ಇಟ್ಟು ಮಸೀದಿಗೆ ಬಂದರು. ಮಿಂಬರಿನ ಕೊನೆಯ ಸ್ಟೆಪ್ಪಿನಲ್ಲಿ ಕುಳಿತು ತನ್ನ ಬದುಕಿನ ವಿದಾಯ ಭಾಷಣ ಮಾಡಿದರು. " ನಾನು ನಿಮಗಿಂತ ಮುಂಚೆ ಬದುಕಿಗೆ ವಿದಾಯ ಹೇಳುವವನಾಗಿದ್ದೇನೆ. ನನ್ನ ನಂತರ ನೀವು ಕೂಡಾ ನನ್ನನ್ನು ಹಿಂಬಾಲಿಸುವಿರಿ. ನಿಮಗೆ ವಾಗ್ದಾನ ಮಾಡಿದ ಸ್ಥಳ ಹೌಲ್ ಆಗಿದೆ. ಅಲ್ಲಿ ನನ್ನನ್ನು ಸಮೀಪಿಸಲು ಬಯಸುವವರು ತನ್ನ ಕೈ ಮತ್ತು ನಾಲಗೆಯನ್ನು ಅನಾವಶ್ಯವಾದ ಕಾರ್ಯಗಳಿಂದ ತಡೆದು ನಿಲ್ಲಿಸಲಿ."
ಒಂದು ಸುಬಹ್ ನಮಾಜಿನ ಸಮಯ. ಮುಸ್ಲಿಮರು ಸುಬಹ್ ನಮಾಜು ನಿರ್ವಹಿಸುತ್ತಿರುವಾಗ ನೆಬಿ ಸ.ಅ ರವರು ತನ್ನ ರೂಮಿನಿಂದ ಇಣುಕಿ ನೋಡಿದರು.
ನೆಬಿ ಸ.ಅ ರವರು ನಮಾಜಿಗೆ ಬರುತ್ತಾರೆ ಎಂದು ಭಾವಿಸಿ ಸ್ವಹಾಬಿಗಳು ತೀವ್ರ ಉಲ್ಲಸಿತರಾದರು. ಅಬೂಬಕರ್ ಸಿದ್ದೀಕ್ ರ.ಅ ಇಮಾಮತ್ ನಿಲ್ಲುವ ಜಾಗದಿಂದ ಹಿಂದೆ ಸರಿದರು. ಆದರೆ ಅದು ನೆಬಿ ಸ.ಅ ರವರ ಅಂತಿಮ ನೋಟವಾಗಿತ್ತು. ನಮಾಜು ಪೂರ್ತಿ ಮಾಡಲು ಕೈ ಸನ್ನೆ ಮಾಡಿ ನೆಬಿ ಸ.ಅ ರವರು ತನ್ನ ಮುಖವನ್ನು ರೂಮಿನ ಒಳಗೆಳೆದು ಪರದೆ ಕೆಳಗೆಳೆದರು. ಈ ದಿನ ಳುಹಾದ ಸಮಯವಾದಾಗ ನೆಬಿ ಸ.ಅ ವಫಾತಾದರು.
ಹಿಜ್ರಾ ಹನ್ನೊಂದನೇ ವರ್ಷ ರಬೀವುಲ್ ಅವ್ವಲ್ ಹನ್ನೆರಡು ಸೋಮವಾರವಾಗಿತ್ತು ಲೋಕ ನೇತಾರರಾದ ಅಂತ್ಯ ಪ್ರವಾದಿ ಮುಹಮ್ಮದ್ ಸ.ಅ ರವರ ವಫಾತ್. ವಫಾತಾಗುವಾಗ 63 ವರ್ಷ ಪ್ರಾಯವಾಗಿತ್ತು.
ವಫಾತಿನ ವಾರ್ತೆ ಕೇಳಿ ಮುಸ್ಲಿಮರು ತೀವ್ರ ದುಃಖಿತರಾದರು. ಉಮರು ಬ್ನುಲ್ ಖತ್ತಾಬ್ ರ.ಅ ರವರಿಗೆ ಬುದ್ಧಿ ಭ್ರಮಣೆ ಸಂಭವಿಸಿತು. ಉಸ್ಮಾನ್ ರ.ಅ ರವರಿಗೆ ಮಾತೇ ಹೊರಡದ ರೀತಿಯಲ್ಲಿ ನಿಶ್ಯಬ್ದರಾದರು. ಅಲಿಯ್ಯುಬ್ನು ಅಬೀ ತಾಲಿಬ್ ರ.ಅ ಮೌನಿಯಾದರು. ಅಬ್ದುಲ್ಲಾಹಿ ಉನೈಸ್ ರ.ಅ ಮರಣ ಹೊಂದಿದರು. ಪರಿಂಭ್ರಾತರಾದ ಜನರನ್ನು ಅಬೂಬಕರ್ ಸಿದ್ದೀಕ್ ರ.ಅ ಆಗಮಿಸಿ ಸಮಾಧಾನ ಪಡಿಸಿದರು. ಎಲ್ಲರೂ ಶಾಂತರಾದರು. ಅಬೂಬಕರ್ ಸಿದ್ದೀಕ್ ರ.ಅ ರವರನ್ನು ಅವರು ಖಲೀಫರಾಗಿ ಆರಿಸಿದರು. ಅದರ ನಂತರ ನೆಬಿ ಸ.ಅ ರವರ ಪವಿತ್ರ ಶರೀರವನ್ನು ಸ್ನಾನ ಮಾಡಿಸಿದರು. ಕಫನ್ ಮಾಡಿ ನಮಾಜು ನಿರ್ವಹಿಸಿದರು. ಮೊದಲು ಪುರುಷರು, ಬಳಿಕ ಸ್ತ್ರೀಯರು ನಂತರ ಮಕ್ಕಳು ನಮಾಜು ಮಾಡಿದರು. ಎಲ್ಲರೂ ಒಬ್ಬಂಟಿಗರಾಗಿಯಾಗಿದೆ ನಮಾಜು ನಿರ್ವಹಿಸಿದ್ದು. ಆಯಿಶಃ ಬೀವಿ ರ.ಅ ರವರ ಮನೆಯಲ್ಲಿ ನೆಬಿ ಸ.ಅ ವಫಾತಾದ ಸ್ಥಳದಲ್ಲೇ ದಫನ ಮಾಡಲಾಯಿತು. ಬುಧವಾರ ಬೆಳಿಗ್ಗೆಯಾಗಿತ್ತು ದಫನ ಕಾರ್ಯ ನೆರವೇರಿಸಿದ್ದು. ಭೂಮಿಯಲ್ಲಿ ಅತ್ಯಂತ ಪವಿತ್ರವಾದ ಈ ಸ್ಥಳಕ್ಕೆ ಹುಜ್ರತು ಶ್ಶರೀಫಃ ಎಂದು ಕರೆಯಲಾಗುತ್ತದೆ.
ಮುಗಿಯಿತು.
Comments